
ಹೊಸಪೇಟೆ: ಮುಂದಿನ ಆರು ತಿಂಗಳಲ್ಲಿ ಸಹಕಾರ ಇಲಾಖೆಯಿಂದ 5 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಹೊಸಪೇಟೆಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊರೋನಾ ಮೊದಲಾದ ಕಾರಣಗಳಿಂದಾಗಿ ಯುವಕರಿಗೆ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಲು ಸಹಕಾರ ಇಲಾಖೆ ನಿರ್ಧರಿಸಿದ್ದು, ಮುಂದಿನ ಆರು ತಿಂಗಳಲ್ಲಿ 5 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸಲು ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಅರ್ಬನ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಕೋ-ಆಪರೇಟಿವ್ ಬ್ಯಾಂಕುಗಳು, ಕೆಎಂಎಫ್ ಡೈರಿ ಸೇರಿದಂತೆ ಸಹಕಾರ ಇಲಾಖೆಯಲ್ಲಿ ಒಟ್ಟು 5 ಸಾವಿರ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ಮುಂದಿನ ಏಪ್ರಿಲ್, ಮೇ ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ರೈತರಿಗೆ ಚೈತನ್ಯ ನೀಡಲು ಆರ್ಥಿಕ ಸ್ಪಂದನೆ ಯೋಜನೆ ಜಾರಿಗೆ ತರಲಾಗಿದೆ. ಈ ಮೂಲಕ ರೈತರಿಗೆ ಸಾಲ ಒದಗಿಸಲಾಗಿದೆ. ರಾಜ್ಯದ 52,460 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.