ಬೆಂಗಳೂರು: ಉದ್ಯಮಿಗಳ ತೀವ್ರ ವಿರೋಧದ ಬೆನ್ನಲ್ಲೇ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.
ಇಂದು ವಿಧಾನಸಭೆಯಲ್ಲಿ ಮಂಡನೆ ಆಗಬೇಕಿದ್ದ ವಿಧೇಯಕವನ್ನು ಸರ್ಕಾರ ದಿಢೀರ್ ಮುಂದೂಡಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿನ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರಕ್ಕೆ ಉದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಗುರುವಾರ ವಿಧೇಯಕ ಮಂಡಿಸಲು ಸಜ್ಜಾಗಿದ್ದ ಸರ್ಕಾರ ತಾತ್ಕಾಲಿಕವಾಗಿ ನಿರ್ಧಾರ ಹಿಂಪಡೆದುಕೊಂಡಿದೆ.