ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ಉದ್ಯೋಗ ಹೆಚ್ಚಳಕ್ಕೆ ಮೂರು ಹೊಸ ಯೋಜನೆ ಘೋಷಿಸಲಾಗಿದೆ. ಕಂಪನಿಗಳು ಕೆಲಸ ನೀಡಿದರೆ ಮೊದಲ ಸಂಬಳ ಸರ್ಕಾರದಿಂದಲೇ ಪಾವತಿಸಲಾಗುವುದು. ಕೆಲಸ ನೀಡಿದ ಕಂಪನಿ, ಕೆಲಸ ಪಡೆದ ನೌಕರನಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುವುದು. ನೌಕರಿ ನೀಡಿದ ಕಂಪನಿಗೆ ಎರಡು ವರ್ಷ ಕಾಲ 3000 ರೂ.ಪಿಎಫ್ ಹಣ ವಾಪಸ್ ನೀಡಲಾಗುವುದು.
ಎಲ್ಲಾ ಬಗೆಯ ಉದ್ಯೋಗಗಳಿಗೆ ಹೊಸದಾಗಿ ಸೇರ್ಪಡೆಯಾಗುವ ನೌಕರರಿಗೆ ಕೇಂದ್ರ ಸರ್ಕಾರವೇ ಮೊದಲ ಒಂದು ತಿಂಗಳ ವೇತನ ಭರಿಸಲಿದೆ. ಇದನ್ನು ಪಡೆಯಲು ಕೆಲಸಕ್ಕೆ ಸೇರಿದವರು ಇಪಿಎಫ್ಒದಲ್ಲಿ ನೋಂದಣಿ ಆಗಿರಬೇಕು. ಮೊದಲ ತಿಂಗಳ ಸಂಬಳ ಮೂರು ಕಂತುಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದ್ದು, ಗರಿಷ್ಠ 15 ಸಾವಿರ ರೂಪಾಯಿ ವೇತನ ಸಿಗಲಿದೆ. ಮಾಸಿಕ ಒಂದು ಲಕ್ಷ ರೂಪಾಯಿ ವರೆಗಿನ ಸಂಬಳದ ಉದ್ಯೋಗಕ್ಕೆ ಸೇರ್ಪಡೆಯಾದವರು ಈ ಯೋಜನೆಗೆ ಅರ್ಹರು. 2.1 ಯುವಕರಿಗೆ ಇದರಿಂದ ಪ್ರಯೋಜನವಾಗಲಿದೆ.
ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಉದ್ಯೋಗಿ, ಉದ್ಯೋಗದಾತರಿಗೆ ನೆರವು ಯೋಜನೆ ಘೋಷಿಸಲಾಗಿದೆ. ಯಾರಾದರೂ ಹೊಸದಾಗಿ ಕೆಲಸಕ್ಕೆ ಸೇರಿದರೆ ನಾಲ್ಕು ವರ್ಷಗಳ ಕಾಲ ಅವರು ಇಪಿಎಫ್ಒಗೆ ನೀಡುವ ಕೊಡುಗೆಯನ್ನು ಪರಿಗಣಿಸಿದ ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗೆ ನೇರವಾಗಿ ನಿರ್ದಿಷ್ಟ ಪ್ರಮಾಣದ ಹಣಕಾಸು ನೆರವು ಒದಗಿಸಲಾಗುವುದು. ಮಾಸಿಕ ಒಂದು ಲಕ್ಷ ರೂ. ವರೆಗಿನ ಸಂಬಳ ಹೊಂದಿರುವ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಕಂಪನಿಗಳಿಗೆ ಪಿಎಫ್ ವಾಪಸ್ ಯೋಜನೆ ಲಾಭ ಸಿಗಲಿದೆ. ಪ್ರತಿ ಕೆಲಸ ಕೊಡುವ ಕಂಪನಿಗಳು ಎರಡು ವರ್ಷಗಳ ಕಾಲ ನೀಡುವ 3000 ರೂ. ವರೆಗಿನ ಕೊಡುಗೆಯನ್ನು ಕೇಂದ್ರ ಸರ್ಕಾರ ಮರಳಿಸಲಿದೆ.