ಮನೆ, ಆಸ್ತಿ ಖರೀದಿಸುವ ಮುನ್ನ ಅನೇಕರು ಜಾತಕ ನೋಡ್ತಾರೆ. ಮತ್ತೆ ಕೆಲವರು ಭೂತ ಪ್ರೇತದ ತೊಂದರೆ ಇದೆಯಾ ಎಂಬುದನ್ನು ನೋಡ್ತಾರೆ. ಮನೆಯಲ್ಲಿ ಭೂತದ ತೊಂದರೆ ಇದೆ ಎಂಬುದು ಗೊತ್ತಾದ್ರೆ ಅದನ್ನು ಖರೀದಿಸುವುದಿರಲಿ, ಮನೆಯೊಳಗೆ ಹೋಗಲೂ ಇಷ್ಟಪಡುವುದಿಲ್ಲ. ಒಂದು ವೇಳೆ ಗೊತ್ತಿಲ್ಲದೆ ಖರೀದಿಸಿದ್ದರೆ ಹತ್ತು ಹಲವು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಚೀನಾದ ಮಂದಿ ಇಂತಹ ಜಾಗವನ್ನೇ ಬಂಡವಾಳವಾಗಿರಿಸಿಕೊಂಡು ಜನರಿಗೆ ನೌಕರಿ ಕೊಡುತ್ತಿದ್ದಾರೆ!
ಕೇಳಲು ಭಯಾನಕವಾಗಿದ್ದರೂ ಇದು ನಿಜ. ಚೀನಾದವರು ಈಗ ಮೋಸ್ಟ್ ರಿಸ್ಕಿ ಜಾಬ್ ಹುಟ್ಟುಹಾಕಿದ್ದಾರೆ. ಇಲ್ಲಿನ ರಿಯಲ್ ಎಸ್ಟೇಟ್ ಏಜೆನ್ಸಿಗಳು ಮಾರಾಟವಾಗದ ಬಂಗಲೆಗಳನ್ನು ಬಂಡವಾಳವಾಗಿಟ್ಟುಕೊಂಡು ‘ಚೀನಾ ಹಂಟೆಡ್ ಹೌಸ್ ಟೆಸ್ಟರ್ಸ್’ ನೌಕರಿ ಕೊಡುತ್ತಿದ್ದಾರೆ. ಇದಕ್ಕೆ ಒಳ್ಳೆಯ ಸಂಬಳವನ್ನೂ ಫಿಕ್ಸ್ ಮಾಡಿದ್ದಾರೆ. ಈ ನೌಕರಿ ಸಿಕ್ಕವರು ಭೂತದ ಮನೆಯಲ್ಲಿ ಒಂದು ರಾತ್ರಿ ಮಲಗಿ ಸ್ಯಾಲರಿ ಪಡೆಯಬಹುದು.
ಹಂಟೆಡ್ ಹೌಸ್ ಟೆಸ್ಟರ್ಸ್ ನೌಕರಿ ಸರಳವಲ್ಲ. ಅಲ್ಲಿ ಹೋಗುವವರು ತಮ್ಮ ಜೀವದ ಹಂಗು ತೊರೆದು ಹೋಗಬೇಕಾಗುತ್ತದೆ. ಬಹಳ ವರ್ಷಗಳಿಂದ ಖಾಲಿ ಬಿದ್ದಿರುವ ಮನೆಯಲ್ಲಿ ಉಳಿದು ಅಲ್ಲಿ ಯಾವ ಭೂತವೂ ಇಲ್ಲ ಎಂಬುದನ್ನು ಸಾಬೀತು ಮಾಡುವುದು ಸುಲಭವಲ್ಲ.
ಇಲ್ಲಿ ವಾಸಿಸುವವರಿಗೆ 1 ನಿಮಿಷಕ್ಕೆ 1 ಯುಆನ್ ಅಂದರೆ 60 ನಿಮಿಷಕ್ಕೆ 60 ಯುಆನ್ ಸಿಗುತ್ತದೆ. ಅಂದರೆ ಒಬ್ಬ ವ್ಯಕ್ತಿ 24 ಗಂಟೆ ಭೂತದ ಬಂಗಲೆಯಲ್ಲಿ ಮಲಗಿದರೆ ಅವನಿಗೆ 16,744 ರೂಪಾಯಿ ದೊರೆಯುತ್ತದೆ.
ಬಹಳ ಸಮಯದಿಂದ ಬಳಕೆಯಲ್ಲಿ ಇರದ ಮನೆಗೆ ಸ್ವತಃ ಮಾಲೀಕರು ಅಥವಾ ಹೂಡಿಕೆದಾರರೇ ಹೋಗಲು ಬಯಸುವುದಿಲ್ಲ. ಹಾಗಾಗಿ ಇದಕ್ಕಾಗಿ ಚೀನಾದವರು ಹೋಮ್ ಟೆಸ್ಟರ್ಸ್ ಅನ್ನು ಹುಡುಕುತ್ತಾರೆ. ರಿಯಲ್ ಎಸ್ಟೇಟ್ ಏಜೆಂಟ್ಸ್ ಮೂಲಕ ಭೂತದ ಮನೆಯಲ್ಲಿ ಇರುವ ಅನುಭವ ಹೊಂದಿರುವವರನ್ನು ಹುಡುಕಿಸಲಾಗುತ್ತದೆ. ಬಂಗಲೆಯಲ್ಲಿ 24 ಗಂಟೆ ಉಳಿದ ನಂತರ ಅವರು ತಮ್ಮ ಕೆಲಸಗಾರರಿಗೆ ವಿಡಿಯೋ ಮೂಲಕ ಆ ಮನೆಯಲ್ಲಿ ಉಳಿಯಲು ಯಾವುದೇ ತೊಂದರೆ ಇಲ್ಲ ಎಂದು ಹೇಳಬೇಕು. ಹೆಚ್ಚಿನ ಜನ ಇದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾರೆ.
ಭೂತ ಬಂಗಲೆಯ ವಿಷಯ ಏನೇ ಇದ್ದರೂ ಯಾವಾಗಲೂ ಚಿತ್ರ ವಿಚಿತ್ರ ದಾಖಲೆಗಳಿಗೆ, ಆಹಾರ ಪದ್ಧತಿಗೆ ಹೆಸರುವಾಸಿಯಾದ ಚೀನಾ ಈಗ ವೀಯರ್ಡ್ ಜಾಬ್ ಅರೌಂಡ್ ದ ವರ್ಲ್ಡ್ ಮಾಡಲು ಹೊರಟಿದೆ. ಆ ಭೂತದ ಬಂಗಲೆಯಲ್ಲಿ ಕೆಲಸ ಮಾಡಲು ಎಷ್ಟು ಜನ ಮುಂದಾಗ್ತಾರೆ ಎಂಬುದನ್ನು ಕಾದುನೋಡಬೇಕು.