ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಮುಖ್ಯ ಗೇಟ್ ಬಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಹಿಂದೂ ಸೇನಾ ನಾಯಕ ಸುರ್ಜಿತ್ ಯಾದವ್ ಭಗವಾ ಜೆಎನ್ಯು ಪೋಸ್ಟರ್ಗಳು ಹಾಗೂ ಕೇಸರಿ ಧ್ವಜಗಳನ್ನು ಹಾಕಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ದೆಹಲಿ ಪೊಲೀಸರು ಎಲ್ಲಾ ಕೇಸರಿ ಧ್ವಜಗಳು ಹಾಗೂ ಪೋಸ್ಟರ್ಗಳನ್ನು ತೆಗೆದು ಹಾಕಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕಾವೇರಿ ಹಾಸ್ಟೆಲ್‌ನಲ್ಲಿ ರಾಮನವಮಿಯಂದು ಮಾಂಸಾಹಾರಿ ಆಹಾರವನ್ನು ನೀಡಿದ್ದಕ್ಕಾಗಿ ಎರಡು ಗುಂಪುಗಳಾದ ಎಬಿವಿಪಿ ಮತ್ತು ಜೆಎನ್‌ಯುಎಸ್‌ಯು ವಿದ್ಯಾರ್ಥಿಗಳ ಘರ್ಷಣೆಗೆ ನಾಲ್ಕು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಈ ಘಟನೆಯಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಎಬಿವಿಪಿ ರಾಮನವಮಿ ಹಬ್ಬದಂದು ಹಾಸ್ಟೆಲ್‌ನಲ್ಲಿ ಆಯೋಜಿಸಲಾದ ಪೂಜಾ ಕಾರ್ಯಕ್ರಮಕ್ಕೆ ಎಡಪಂಥೀಯರು ಅಡ್ಡಿಪಡಿಸಿದ್ದಾರೆ ಎಂದು ಹೇಳಿದೆ.
ಎರಡೂ ಕಡೆಯವರು ಕಲ್ಲು ತೂರಾಟ ನಡೆಸಿದ ಪರಿಣಾಮ ಆರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ರಾಮ ನವಮಿಯಂದು ನಡೆದ ವಿದ್ಯಾರ್ಥಿಗಳ ಘರ್ಷಣೆಯ ಬಗ್ಗೆ ಶಿಕ್ಷಣ ಸಚಿವಾಲಯವು ಜೆ ಎನ್ ಯು ನಿಂದ ವರದಿಯನ್ನು ಕೇಳಿದೆ.