ಶಂಕಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸ್ಥಳೀಯ ನಾಯಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಲಾಂ ಹುಸೇನ್ ಲೋನ್ ಎಂದು ಕೊಲೆಯಾದ ಮುಖಂಡ.
ಕುಲ್ಗಾಂನಲ್ಲಿ ಅಪ್ನಿ ಪಕ್ಷದ ನಾಯಕರಾಗಿರುವ ಅವರನ್ನು ಮನೆಯ ಹೊರಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಪಿಡಿಪಿ ಬ್ಲಾಕ್ ಮಾಜಿ ಅಧ್ಯಕ್ಷರಾಗಿದ್ದ ಅವರು ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಪ್ನಿ ಪಕ್ಷದ ಪರ ಕೆಲಸ ಮಾಡುತ್ತಿದ್ದರು.
ಕುಲ್ಗಾಮ್‌ನ ಗುಲಾಂ ಹುಸೇನ್ ಲೋನ್ ನ ದೇವಸಾರ್ ನಲ್ಲಿರುವ ಅವರ ನಿವಾಸದ ಹೊರಗೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಗಂಭೀರವಾಗಿ ಗಾಯಗೊಂಡ ಲೋನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಸ್ಪತ್ರೆಗೆ ದಾಖಲಿಸುವ ಮೊದಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಕುಲ್ಗಾಂನಲ್ಲಿರುವ ದೇವಸಾರ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಶಂಕಿತ ಉಗ್ರರನ್ನು ಪತ್ತೆ ಮಾಡಲು ಶೋಧ ಕಾರ್ಯಾಚರಣೆ ಆರಂಭಿಸಿವೆ.
ಗುಲಾಂ ಹುಸೇನ್ ಲೋನ್ ಮೇಲಿನ ದಾಳಿಯನ್ನು ರಾಜಕೀಯ ನಾಯಕರು ಖಂಡಿಸಿದ್ದಾರೆ. ಅಪ್ನಿ ಪಕ್ಷದ ಪ್ರಮುಖ ರಾಜಕೀಯ ಕಾರ್ಯಕರ್ತ ಗುಲಾಂ ಹಸನ್ ಲೋನ್ ಅವರ ಮೇಲಿನ ದಾಳಿ ಹೇಡಿತನದ ಕೃತ್ಯ. ಇದನ್ನು ಬಲವಾಗಿ ಖಂಡಿಸುವುದಾಗಿ ಅಪ್ನಿ ಪಾರ್ಟಿಯು ಹೇಳಿದೆ.
ಪಿಡಿಪಿ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಘಟನೆ ದುರದೃಷ್ಟಕರ. ಕಾಶ್ಮೀರದಲ್ಲಿ ರಾಜಕೀಯ ಹತ್ಯೆಗೆ ಅಂತ್ಯವಿಲ್ಲ ಎಂದು ತೋರುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯ ರಾಜ್ಯ ಘಟಕ ದಾಳಿಯನ್ನು ಖಂಡಿಸಿ, ಉಗ್ರರ ನಾಚಿಕೆಗೇಡಿನ ಮತ್ತು ಹೇಡಿತನದ ಕೃತ್ಯ ಇದಾಗಿದೆ ಎಂದು ತಿಳಿಸಿದೆ.