![](https://kannadadunia.com/wp-content/uploads/2021/12/terror-army-jammu-and-kashmir.png)
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯ ಆರು ಉಗ್ರರನ್ನು ಹತ್ಯೆಗೈಯಲಾಗಿದೆ. ಅನಂತನಾಗ್ ಮತ್ತು ಕುಲ್ಗಾಂನಲ್ಲಿ 6 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಇವರಲ್ಲಿ ಇಬ್ಬರು ಪಾಕಿಸ್ತಾನಿಗಳು, ಇಬ್ಬರು ಸ್ಥಳೀಯ ಭಯೋತ್ಪಾದಕರು ಎಂದು ಹೇಳಲಾಗಿದ್ದು, ಉಳಿದವರ ಗುರುತು ಪತ್ತೆ ಕಾರ್ಯ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್(ಜೆಇಎಂ) ಗೆ ಸೇರಿದ ಆರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಕಾರ, ಹತರಾದ ನಾಲ್ವರು ಭಯೋತ್ಪಾದಕರನ್ನು ಇದುವರೆಗೆ ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಪಾಕಿಸ್ತಾನಿ ಹಾಗೂ ಇಬ್ಬರು ಸ್ಥಳೀಯ ಭಯೋತ್ಪಾದಕರು. ಇನ್ನಿಬ್ಬರು ಉಗ್ರರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಇದು ನಮಗೆ ದೊಡ್ಡ ಯಶಸ್ಸು ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಅವರನ್ನು ಉಲ್ಲೇಖಿಸಿ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಮಿರ್ಹಾಮಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ ಕೌಂಟರ್ ನಡೆದಿದೆ. ಅನಂತ್‌ನಾಗ್‌ನ ದೂರು ಪ್ರದೇಶದ ನೌಗಾಮ್ ಶಹಾಬಾದ್‌ನಲ್ಲಿ ಮತ್ತೊಂದು ಎನ್‌ಕೌಂಟರ್ ನಡೆದಿದೆ.