ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಬಾರಾಮುಲ್ಲಾದಲ್ಲಿ ಎಲ್‌ಒಸಿ ಉದ್ದಕ್ಕೂ ಸೇನೆ ಪ್ರಮುಖ ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿದ್ದು, 3 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ಗುರುವಾರ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ. ಈ ಕಾರ್ಯಾಚರಣೆಯಲ್ಲಿ ಕನಿಷ್ಠ ಮೂವರು ಭಯೋತ್ಪಾದಕರು ಹತರಾಗಿದ್ದಾರೆ.
ಸೇನಾ ಗುಪ್ತಚರ ಸಂಸ್ಥೆಗಳ ನಿರ್ದಿಷ್ಟ ಗುಪ್ತಚರ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ನ ಕಮಲ್ ಕೋಟೆ ಪ್ರದೇಶದ ಮಡಿಯನ್ ನಾನಕ್ ಪೋಸ್ಟ್ ಬಳಿ ಎಲ್‌ಒಸಿಯ ಈ ಭಾಗದಲ್ಲಿ ನುಸುಳಲು ಪ್ರಯತ್ನಿಸಿದ ಭಯೋತ್ಪಾದಕರನ್ನು ಭದ್ರತಾ ಪಡೆ ಸಿಬ್ಬಂದಿ ಕೊಂದಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ದಟ್ಟವಾದ ಗಿಡಗಂಟಿಗಳು, ಮರದ ಎಲೆಗಳ ಮರೆಯ ನಡುವೆ ನಿರಂತರ ಮಳೆ ಸುರಿಯುವ ಸಂದರ್ಭದಲ್ಲಿ ಗಡಿಯೊಳಗೆ ನುಸಳಲು ಭಯೋತ್ಪಾದಕರು ಮುಂದಾಗಿದ್ದಾರೆ. ಭಾರೀ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕರು ಕೊಲ್ಲಲ್ಪಟ್ಟರು. ಭಯೋತ್ಪಾದಕರ ಮೂರು ಶವಗಳು, ಎರಡು ಎಕೆ ರೈಫಲ್ ಗಳು, ಒಂದು ಚೀನಾದ ಎಂ -16 ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆ ಸಿಬ್ಬಂದಿ ವಶಪಡಿಸಿಕೊಂಡಿಕೊಂಡಿದ್ದಾರೆ.