ನವದೆಹಲಿ: ಇತ್ತೀಚೆಗಷ್ಟೇ ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡಿದ ಪರಿಣಾಮ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಜುಲೈ ನಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳ ಒಟ್ಟಾರೆ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ತಿಳಿಸಿದೆ.
ಜಿಯೋ, ಏರ್ಟೆಲ್ ವಿಐ ಕಂಪನಿಗಳು 10 ರಿಂದ 27ರಷ್ಟು ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡಿವೆ. ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಯ ಆರಂಭಿಕ ಶುಲ್ಕವನ್ನು ದುಪ್ಪಟ್ಟುಗೊಳಿಸಿವೆ. ಖಾಸಗಿ ಕಂಪನಿಗಳ ದರ ಏರಿಕೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಗೆ ವರದಾನವಾಗಿದೆ.
ಬಿಎಸ್ಎನ್ಎಲ್ ಗೆ ಹೊಸದಾಗಿ 29.4 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಜಿಯೋ 14.10 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಏರ್ಟೆಲ್ 16.9 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ.
ಮಾರುಕಟ್ಟೆಯಲ್ಲಿ ಜಿಯೋ ಪಾಲು ಶೇಕಡ 40.71 ರಿಂದ ಶೇಕಡ 40.68ಕ್ಕೆ ಇಳಿಕೆಯಾಗಿದೆ. ಏರ್ಟೆಲ್ ಪಾಲು ಶೇಕಡ 30.23 ರಿಂದ ಶೇಕಡ 33.12ರಷ್ಟು ಕುಸಿದಿದೆ. ವೊಡಾಫೋನ್ ಪಾಲು ಶೇಕಡ 18.56 ರಿಂದ ಶೇಕಡ 18.46ಕ್ಕೆ ಇಳಿಕೆಯಾಗಿದೆ.