ಮುಂಬೈ: ಮಾಜಿ ಪ್ರೇಯಸಿಯ ಜತೆಗಿದ್ದ ಮಾಲ್ವಾನಿಯ 20 ವರ್ಷದ ಯುವಕನನ್ನು ಭಗ್ನ ಪ್ರೇಮಿಯೊಬ್ಬ ಹತ್ಯೆ ಮಾಡಿದ ಪರಿಣಾಮ, ತ್ರಿಕೋನ ಪ್ರೇಮ ಪ್ರಕರಣ ದುರಂತ ಅಂತ್ಯ ಕಂಡಿದೆ.
ಕೊಲೆಗೀಡಾದ ಯುವಕ ದೀಪಕ್ ಕಟುಕರ್ ಮೇ 12ರಂದು ನಾಪತ್ತೆಯಾಗಿದ್ದ. ಮೇ 14ರಂದು ವಸಾಯಿ ಕೊಲ್ಲಿ ಪ್ರದೇಶದಲ್ಲಿ ಆತನ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂದಿವಿಲಿ ಪೊಲೀಸರ ಪ್ರಕಾರ, ಕಟುಕರ್ ತನ್ನ ಸ್ನೇಹಿತರನ್ನು ಭೇಟಿಯಾಗಲು ಮೇ 12 ರಂದು ಹೊರಗೆ ಹೋದಾತ ಮತ್ತೆ ಮನೆಗೆ ಹಿಂತಿರುಗಿಲ್ಲ. ಈ ಹಿಂದೆ ಕಾಂದಿವಿಲಿಯಲ್ಲಿ ವಾಸವಿದ್ದ ಕಾರಣ ಕಟುಕರ್‌ಗೆ ಆ ಪ್ರದೇಶದಲ್ಲಿ ಸ್ನೇಹಿತರಿದ್ದರು. ಆ ದಿನ ಅವರನ್ನು ಭೇಟಿಯಾಗಲು ತೆರಳಿದ್ದ ಎಂದು ಆತನ ತಾಯಿ ಪೊಲೀಸರಿಗೆ ತಿಳಿಸಿದ್ದರು.
ಯುವಕನ ಕರೆ ಡೇಟಾ ದಾಖಲೆಗಳನ್ನು ಬಳಸಿಕೊಂಡು, ಇಬ್ಬರು ಸ್ನೇಹಿತರನ್ನು ಪತ್ತೆಹಚ್ಚಿದೆವು, ನಂತರ ಸರೋವರ್ ಹೋಟೆಲ್‌ನಲ್ಲಿ ಸೂರಜ್ ವಿಶ್ವಕರ್ಮ (27) ನನ್ನು ಭೇಟಿ ಮಾಡಿದ್ದ. ಸೂರಜ್ ವಿಶ್ವಕರ್ಮನನ್ನು ಕೊನೆಯದಾಗಿ ಭೇಟಿ ಮಾಡಿದ ಕಾರಣ, ಆತನ ಮೇಲೆ ಪೊಲೀಸರಿಗೆ ಸಂದೇಹ ವ್ಯಕ್ತವಾಗಿತ್ತು. ದೀಪಕ್ ಸ್ನೇಹಿತರು ಮತ್ತು ತಾಯಿ ಸೂರಜ್ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದ್ದರು. ಹೀಗಾಗಿ ಅವರ ಸಂದೇಹದಂತೆ ಪರಿಶೋಧಿಸಿದ್ದೆವು ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ದೀಪಕ್ ನಾಪತ್ತೆಯಾದ ದಿನ ಭಾಯಂದರ್ ರೈಲ್ವೆ ಸೇತುವೆ ಬಳಿ ವಿಶ್ವಕರ್ಮ ಇದ್ದ ಎಂಬುದು ಕರೆ ಡೇಟಾ ದಾಖಲೆ ಪ್ರಕಾರ ದೃಢಪಟ್ಟಿತ್ತು. ಇದಾಗಿ ಆತ ಅಲ್ಲಿಂದ ಉತ್ತರ ಪ್ರದೇಶದ ಜೌನ್‌ಪುರ ಗ್ರಾಮಕ್ಕೆ ತೆರಳಿದ್ದ. ಎಸಿಪಿ ಶೈಲೇಂದ್ರ ಧಿವರ್ ಮೇಲ್ವಿಚಾರಣೆಯ ತನಿಖಾ ತಂಡ ಜೌನ್‌ಪುರಕ್ಕೆ ತೆರಳಿ ಆತನನ್ನು ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆ ವೇಳೆ ವಿಶ್ವಕರ್ಮ ತಪ್ಪೊಪ್ಪಿಕೊಂಡಿದ್ದು, ತನ್ನ ಗೆಳತಿಯನ್ನು ಪ್ರೀತಿಸುತ್ತಿದ್ದರಿಂದ ದೀಪಕ್‌ನನ್ನು ಹತ್ಯೆ ಮಾಡಿದೆ. ಮಹಿಳೆ ಜತೆಗೆ ಈ ಹಿಂದೆ ಸಂಬಂಧವಿತ್ತು. ಆದರೆ ಮಹಿಳೆಯ ಕುಟುಂಬದ ಒತ್ತಡದಿಂದಾಗಿ ಒಂದೆರಡು ವರ್ಷಗಳ ಹಿಂದೆ ಮುರಿದುಬಿದ್ದಿದೆ. ಆಕೆ ಈಗ ದೀಪಕ್ ಜತೆಗೆ ಸಂಬಂಧ ಬೆಳೆಸಿದಾಗ ಸಹಿಸಲಾಗಲಿಲ್ಲ. ಹೀಗಾಗಿ ಕಾಂದಿವಿಲಿಯಲ್ಲಿ ದೀಪಕ್‌ನನ್ನು ಭೇಟಿಯಾಗಿ ಭಾಯಂದರ್‌ಗೆ ಹೋದೆ. ಬಿಯರ್ ಖರೀದಿಸಿ ರೈಲ್ವೇ ಬ್ರಿಡ್ಜ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ದೀಪಕ್‌ನನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾದೆ ಎಂದು ತಿಳಿಸಿದ್ದಾನೆ.