ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಪತ್ನಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಮಂಗಳವಾರದಿಂದ ತಮ್ಮ ಬೋಧನಾ ವೃತ್ತಿಗೆ ಮರಳಿದ್ದು, ಉತ್ತರ ವರ್ಜಿನಿಯಾದ ಕಾಲೇಜಿಗೆ ಖುದ್ದಾಗಿ ಹಾಜರಾಗಿದ್ದಾರೆ.
ಕೋವಿಡ್ ಕಾರಣಕ್ಕಾಗಿ ಈವರೆಗೂ ಆನ್ ಲೈನ್ ತರಗತಿಗಳು ನಡೆಯುತ್ತಿದ್ದು, ಹಾಗಾಗಿ ಈವರೆಗೂ ಅವರು ಕಾಲೇಜು ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕವೇ ಪಾಠ ಮಾಡುತ್ತಿದ್ದರು. ಇದೀಗ ಕಾಲೇಜುಗಳು ಆರಂಭವಾಗಿರುವ ಕಾರಣ ತಾವು ಬೋಧನಾ ವೃತ್ತಿಯಲ್ಲಿ ತೊಡಗಿರುವ ಕಾಲೇಜಿಗೆ ಭೇಟಿ ನೀಡಿದ್ದಾರೆ.
2009 ರಿಂದಲೂ ವರ್ಜಿನಿಯಾ ಕಾಲೇಜಿನಲ್ಲಿ ಜಿಲ್ ಬಿಡೆನ್ ಬೋಧಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಮತ್ತೆ ವಿದ್ಯಾರ್ಥಿಗಳಿಗೆ ಮುಖಾಮುಖಿಯಾಗಿ ಪಾಠ ಮಾಡಲು ಉತ್ಸುಕರಾಗಿದ್ದಾರೆ.
ಅಲ್ಲದೆ ಶ್ವೇತಭವನ ತೊರೆದು ತಮ್ಮ ವೃತ್ತಿಯಲ್ಲಿ ತೊಡಗಿಕೊಂಡಿರುವ ಅಮೆರಿಕದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೂ ಜಿಲ್ ಬಿಡೆನ್ ಪಾತ್ರರಾಗಿದ್ದಾರೆ.