ನಟಿ ಜಿಯಾ ಖಾನ್ ಹತ್ತು ವರ್ಷಗಳ ಹಿಂದೆ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಮ್ಮ ತಾಯಿಯ ಕಣ್ಣಿಗೆ ಬಿದ್ದಿದ್ದರು. 2013ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಕೆ ಬರೆದಿಟ್ಟ ಆತ್ಮಹತ್ಯಾ ನೋಟ್ ಪ್ರಕಾರ ಜಿಯಾ ಖಾನ್ ಪ್ರಿಯಕರ ಸೂರಜ್ ಪಂಚೋಲಿಯೊಂದಿಗೆ ಸಂಬಂಧ ಹಳಸಿದ್ದ ಕಾರಣ ಆಕೆ ಈ ತೀವ್ರ ನಿರ್ಧಾರಕ್ಕೆ ಬಂದಿದ್ದರು.
ಸೂರಜ್ ತನಗೆ ಮೋಸ ಮಾಡಿದ್ದಲ್ಲದೇ, ಅತ್ಯಾಚಾರ ಮಾಡಿದ್ದು, ಈ ಕಾರಣದಿಂದ ತಾನು ಗರ್ಭಪಾತಕ್ಕೂ ಒಳಗಾಗಿದ್ದಾಗಿ ಜಿಯಾ ನೋಟ್‌ನಲ್ಲಿ ಹೇಳಿಕೊಂಡಿದ್ದರು. ಇದೀಗ, ಹತ್ತು ವರ್ಷಗಳ ಬಳಿಕ ಮುಂಬಯಿ ಕೋರ್ಟ್ ಈ ಪ್ರಕರಣ ಸಂಬಂಧ ನಾಳೆ ತನ್ನ ತೀರ್ಪು ನೀಡುವ ನಿರೀಕ್ಷೆ ಇದೆ. ಪ್ರಕರಣ ಸಂಬಂಧ ಏಪ್ರಿಲ್ 20ರಂದು ನ್ಯಾಯಾಧೀಶ ಎಎಸ್ ಸಯ್ಯದ್ ಕೊನೆಯ ಆಲಿಕೆ ಕೇಳಿಸಿಕೊಂಡಿದ್ದಾರೆ.
ತಮ್ಮ ಮಗಳಿಗೆ ನ್ಯಾಯಾಲಯದ ತೀರ್ಪು ನ್ಯಾಯ ಒದಗಿಸುವ ವಿಶ್ವಾಸವನ್ನು ಜಿಯಾ ತಾಯಿ ರಬಿಯಾ ಖಾನ್ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟ ಆಪಾದನೆ ಮೇಲೆ ಸೂರಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಜಾಮೀನಿನ ಮೇಲೆ ಸೂರಜ್ ಹೊರಗಿದ್ದಾರೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು ಜಿಯಾ ತಾಯಿ. ಡಿಸೆಂಬರ್ 2015ರಲ್ಲಿ ಚಾರ್ಜ್‌ಶೀಟ್ ದಾಖಲಿಸಿದ್ದ ಸಿಬಿಐ, ಸೂರಜ್ ವಿರುದ್ಧ ಐಪಿಸಿಯ 306ನೇ ವಿಧಿಯಡಿ ಪ್ರಕರಣ ದಾಖಲಿಸಿತ್ತು.