ಅದಾಗ ತಾನೇ ಜನಿಸಿದ ತನ್ನ ಹಸುಗೂಸನ್ನು ಮಹಿಳೆಯೊಬ್ಬಳು 4.5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ಆಕೆ ಹಾಗೂ 11 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ಜರುಗಿದೆ.
ಆಶಾ ದೇವಿ ಎಂಬಾಕೆ ತನಗೆ ಮಗು ಜನಿಸುತ್ತಲೇ ಅದನ್ನು ಮಾರಾಟ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಮಗುವಿನ ತಾಯಿ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ.
ಛತ್ರಾದ ಉಪ ಕಮಿಷನರ್ ಅಬು ಇಮ್ರಾನ್ ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದಾರೆ. ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅವಿನಾಶ್ ಕುಮಾರ್ ಹೇಳುವಂತೆ, “ಮಾಹಿತಿ ಸಿಗುತ್ತಲೇ ಕ್ರಮಕ್ಕೆ ಮುಂದಾದ ಪೊಲೀಸರು ಬೊಕಾರೋ ಜಿಲ್ಲೆಯಿಂದ ಹಸುಳೆಯನ್ನು 24 ಗಂಟೆಗಳ ಒಳಗೆ ರಕ್ಷಿಸಿದ್ದಾರೆ.”
ಇದೇ ವೇಳೆ ಆಶಾ ದೇವಿರಿಂದ ಒಂದು ಲಕ್ಷ ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಆಶಾ ದೇವಿಯ ಬಂಧನದಿಂದ ಸಾಹಿಯಾ ದೇವಿ ಅಲಿಯಾಸ್ ಡಿಂಪಲ್ ದೇವಿ ಎಂಬಾಕೆಯ ಜಾಡು ಸಿಕ್ಕಿದ್ದು, ಪೊಲೀಸರು ಆಕೆಯನ್ನೂ ಬಂಧಿಸಿದ್ದಾರೆ.
ಛತ್ರಾ ಹಾಗೂ ಬೊಕಾರೋ ಜಿಲ್ಲೆಯ ಇಬ್ಬರು ಬ್ರೋಕರ್‌ಗಳೊಂದಿಗೆ ಡೀಲ್ ಮಾಡಿಕೊಂಡಿದ್ದ ಹಜ಼ಾರಿಬಾಗ್ ಜಿಲ್ಲೆಯ ಬಡ್ಕಾಗಾಂವ್ ಗ್ರಾಮದ ದಂಪತಿಗಳು ಈ ಮಗುವನ್ನು ಖರೀದಿ ಮಾಡಿದ್ದರು ಎಂದು ತಿಳಿದು ಬಂದಿದೆ. ಮಗುವಿನ ತಾಯಿಗೆ ಒಂದು ಲಕ್ಷ ರೂ. ಕೊಟ್ಟು ಮಿಕ್ಕ 3.5 ಲಕ್ಷ ರೂ.ಗಳನ್ನು ಬ್ರೋಕರ್‌ಗಳು ಹಂಚಿಕೊಂಡಿದ್ದರು.
ಸದರ್ ಆಸ್ಪತ್ರೆಯ ವೈದ್ಯ ಮನೀಶ್ ಲಾಲ್ ಹೇಳಿಕೆಯನುಸಾರ ಛತ್ರಾ ಪೊಲೀಸ್ ಠಾಣೆಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.