ರಾಂಚಿ: ದೇಶದಲ್ಲಿ ಮತ್ತೊಂದು ಭೀಕರ ರೈಲು ಅಪಘಾತ ಸಂಭವಿಸಿದೆ. ಜಾರ್ಖಂಡ್ನಲ್ಲಿ ಗೂಡ್ಸ್ ರೈಲಿಗೆ ಹೌರಾ-ಮುಂಬೈ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದು ಸುಮಾರು 5 ಬೋಗಿಗಳು ಹಳಿತಪ್ಪಿ ಪಲ್ಟಿಯಾಗಿವೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾರ್ಖಂಡ್ನ ಚಕ್ರಧರಪುರದಲ್ಲಿ ರಾಜ್ಖರ್ಸ್ವಾನ್ ಮತ್ತು ಬಡಬಾಂಬೋ ನಡುವೆ ಬೆಳಿಗ್ಗೆ 4.45 ರ ಸುಮಾರಿಗೆ ಅಪಘಾತ ಸಂಭವಿಸಿದೆ.
ರೈಲು ಸಂಖ್ಯೆ. 12810 ಹೌರಾ-CSMT ಎಕ್ಸ್ಪ್ರೆಸ್ ಹೊರಡುತ್ತಿದ್ದಾಗ ಚಕ್ರಧರಪುರ ಬಳಿ ರಾಜ್ಖರ್ಸ್ವಾನ್ ವೆಸ್ಟ್ ಔಟರ್ ಮತ್ತು ಚಕ್ರಧರಪುರ ವಿಭಾಗದ ಬಾರಾಬಾಂಬು ನಡುವೆ ಹಳಿತಪ್ಪಿತು. ಹಳಿತಪ್ಪಿದ ನಂತರ ಬೋಗಿಗಳು ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದವು. ಅಪಘಾತದ ಬಗ್ಗೆ ಮಾಹಿತಿ ದೊರೆತ ಕೂಡಲೇ ಜಿಆರ್ಪಿ ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ರೈಲ್ವೇ ವೈದ್ಯಕೀಯ ತಂಡ ಕೂಡ ಸ್ಥಳಕ್ಕೆ ಬಂದು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದೆ.
ಗಾಯಾಳುಗಳನ್ನು ಚಕ್ರಧರಪುರದ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವನ್ನು ಚಕ್ರಧರಪುರ ರೈಲ್ವೆ ವಿಭಾಗದ ಹಿರಿಯ ಡಿಸಿಎಂ ಆದಿತ್ಯ ಕುಮಾರ್ ಚೌಧರಿ ಖಚಿತಪಡಿಸಿದ್ದಾರೆ. ಚಕ್ರಧರಪುರ ರೈಲ್ವೆ ವಿಭಾಗದಿಂದ ಪರಿಹಾರ ರೈಲು ಸ್ಥಳಕ್ಕೆ ತಲುಪಿದೆ. ಆಂಬ್ಯುಲೆನ್ಸ್ ಮತ್ತು ಪೊಲೀಸ್ ತಂಡಗಳು ಸ್ಥಳದಲ್ಲಿವೆ. ಅಪಘಾತದ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಸೆರೆಕೇಲಾ ಜಿಲ್ಲಾಧಿಕಾರಿ ಕೂಡ ಸ್ಥಳಕ್ಕೆ ಆಗಮಿಸಿದರು. ರೈಲು ಟಾಟಾನಗರದಿಂದ ಬಡಬಾಂಬೋವನ್ನು ಹಾದುಹೋದ ತಕ್ಷಣ, ರೈಲು ಹಠಾತ್ತನೆ ದೊಡ್ಡ ಶಬ್ದದೊಂದಿಗೆ ಹಳಿತಪ್ಪಿತು ಎಂದು ಪ್ರಯಾಣಿಕರು ಹೇಳಿದರು.