ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯಲ್ಲಿ ಶನಿವಾರ ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಬಿದ್ದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಕೆಲವು ಪ್ರಯಾಣಿಕರು ಬಸ್ ನಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಗಿರಿದಿಹ್ ಜಿಲ್ಲೆಯಿಂದ ರಾಂಚಿಗೆ ತೆರಳುತ್ತಿದ್ದ ಬಸ್ ಸೇತುವೆಯ ಕಂಬಿ ಮುರಿದು ನದಿಯಲ್ಲಿ ನೀರು ಕಡಿಮೆ ಇದ್ದ ಸ್ಥಳಕ್ಕೆ ಬಿದ್ದು ಅಪಘಾತ ಸಂಭವಿಸಿದೆ. ತತಿಜಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿವಾನ್ನೆ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ.
ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದರು, ಹಜಾರಿಬಾಗ್ ನ ಸದರ್ ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಕೆಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(RIMS) ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ನದಿಯ ಮಧ್ಯದಲ್ಲಿ ಬಸ್ ನೀರಿಗೆ ಬಿದ್ದಿದ್ದರೆ ಹೆಚ್ಚಿನ ಹಾನಿಯಾಗಬಹುದಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಕೆಲವು ಪ್ರಯಾಣಿಕರು ಇನ್ನೂ ಬಸ್ ನಲ್ಲಿ ಸಿಲುಕಿಕೊಂಡಿದ್ದು, ಗ್ಯಾಸ್ ಕಟ್ಟರ್ ಗಳ ಸಹಾಯದಿಂದ ರಕ್ಷಿಸಲು ಪ್ರಯತ್ನಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಡಿಎಸ್ಪಿ ಶ್ರೇಣಿಯ ಅಧಿಕಾರಿ ಮತ್ತು ಮೂರು ಪೊಲೀಸ್ ಠಾಣೆಯ ಉಸ್ತುವಾರಿಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.