ಜಾರ್ಖಂಡ್ನ ಕೋಡರ್ಮಾ ಜಿಲ್ಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಪತ್ನಿಯೊಂದಿಗೆ ವಿಡಿಯೋ ಕರೆ ಮಾಡುತ್ತಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 32 ವರ್ಷದ ನೀರಜ್ ಕುಮಾರ್ ಮೆಹ್ತಾ ಎಂಬುವವರು ಲೆಂಗ್ರಾಪಿಪರ್ ಗ್ರಾಮದಲ್ಲಿ ಈ ಕೃತ್ಯ ಎಸಗಿದ್ದಾರೆ. ಇವರು ನಾಗಾಲ್ಯಾಂಡ್ ಅಗ್ನಿಶಾಮಕ ಇಲಾಖೆಯಲ್ಲಿ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದರು.
ನೀರಜ್ ಅವರ ಪತ್ನಿ ತಮ್ಮ ತಂಗಿಯ ಮದುವೆಗಾಗಿ ಹಜಾರಿಬಾಗ್ನ ಇಚಾಕ್ನಲ್ಲಿರುವ ತವರು ಮನೆಗೆ ಹೋಗಿದ್ದರು. ಮದುವೆ ಸಮಾರಂಭದ ನಂತರ ಆಕೆ ತಕ್ಷಣ ಮನೆಗೆ ವಾಪಸ್ ಬರದಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಈ ಜಗಳ ವಿಡಿಯೋ ಕರೆಯಲ್ಲೂ ಮುಂದುವರಿದು ವಿಕೋಪಕ್ಕೆ ತಿರುಗಿದೆ. ಮನನೊಂದ ನೀರಜ್ ಪತ್ನಿ ನೋಡುತ್ತಿದ್ದಂತೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೀರಜ್ ಅವರ ಪತ್ನಿ ತಕ್ಷಣವೇ ಅವರ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಆದರೆ, ಅವರು ಕೊಠಡಿಗೆ ತಲುಪುವಷ್ಟರಲ್ಲಿ ತುಂಬಾ ತಡವಾಗಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಬಂದು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸಾದರ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ನಾಗಾಲ್ಯಾಂಡ್ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೊದಲು ನೀರಜ್ ಅವರು ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರು ರಜೆಯ ಮೇಲೆ ಗ್ರಾಮಕ್ಕೆ ಮರಳಿದ್ದರು. ಡೊಮ್ಚಾಂಚ್ ಪೊಲೀಸ್ ಠಾಣೆಯ ಉಸ್ತುವಾರಿ ಓಂಪಾಶ್ ಅವರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.