ರಾಂಚಿ: ವಿವಾಹ ಬಂಧನದಿಂದ ದೂರವಾದ ಸಂದರ್ಭದಲ್ಲಿ ಪತ್ನಿಗೆ ಪತಿ ಜೀವನಾಂಶ ನೀಡಬೇಕು ಎಂಬುದು ಸಾಮಾನ್ಯ ಸಂಗತಿ. ಆದರೆ, ಜಾರ್ಖಂಡ್ ಹೈಕೋರ್ಟ್ ವಿಭಿನ್ನವಾದ ತೀರ್ಪು ನೀಡುವ ಮೂಲಕ ಗಮನಸೆಳೆದಿದೆ.
ಹಿರಿಯರನ್ನು ನೋಡಿಕೊಳ್ಳದಿದ್ದರೆ ಪತ್ನಿ ಜೀವನಾಂಶಕ್ಕೆ ಅರ್ಹಳಲ್ಲ ಎಂದು ಹೇಳಿದೆ. ವಿವಾಹ ಬಂಧನ ತುಂಡರಿಸಿಕೊಂಡ ಪ್ರಕರಣದಲ್ಲಿ ಪತಿ ವಾದ ಮಂಡಿಸಿ, ನನ್ನ ತಾಯಿ ಮತ್ತು ಶತಾಯುಷಿ ಅಜ್ಜಿಯನ್ನು ಬಿಟ್ಟು ಸ್ವತಂತ್ರವಾಗಿ ಬದುಕಲು ಪತ್ನಿ ಬಲವಂತ ಮಾಡಿದ್ದಾಳೆ. ಹೀಗಾಗಿ ಆಕೆ ಜೀವನಾಂಶಕ್ಕೆ ಅರ್ಹಳಲ್ಲ ಎಂದು ಹೇಳಿದ್ದು, ಅವರ ವಾದವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಈ ಕುರಿತಾಗಿ ಯಜುರ್ವೇದ, ಋಗ್ವೇದ, ಮನು ಧರ್ಮಶಾಸ್ತ್ರವನ್ನು ಉಲ್ಲೇಖಿಸಿ ಪತ್ನಿಯ ಕರ್ತವ್ಯ ವಿವರಿಸಿ ಪತಿಯ ತಾಯಿ ಮತ್ತು ಅಜ್ಜಿಗೆ ಸೇವೆ ಸಲ್ಲಿಸುವುದು ಪತ್ನಿಯ ಅನಿವಾರ್ಯ ಕರ್ತವ್ಯ ಎಂದು ಜಾರ್ಖಂಡ್ ಹೈಕೋರ್ಟ್ ನ್ಯಾಯಮೂರ್ತಿ ಸುಭಾಷ್ ಚಂದ್ರ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಭಾರತದಲ್ಲಿ ಮಹಿಳೆಯರು ತಮ್ಮ ವಯಸ್ಸಾದ ಅತ್ತೆ ಅಥವಾ ಅಜ್ಜಿಯರಿಗೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ ಎಂದು ಜಾರ್ಖಂಡ್ ಹೈಕೋರ್ಟ್ ಹೇಳಿದ್ದು, ‘ಮನುಸ್ಮೃತಿ’ಯ ಕೆಲವು ಸಾಲುಗಳನ್ನು ಉಲ್ಲೇಖಿಸಿ ವಯಸ್ಸಾದ ಅತ್ತೆಯವರಿಗೆ ಸೇವೆ ಸಲ್ಲಿಸುವುದು ‘ಸಾಂಸ್ಕೃತಿಕ ಅಭ್ಯಾಸ’ ಎಂದು ಹೇಳಿದೆ.
ಪುರುಷನೊಬ್ಬ ತನ್ನ ಪತ್ನಿಗೆ ಮಾಸಿಕ 30,000 ರೂ. ಮತ್ತು ಅಪ್ರಾಪ್ತ ಮಗನಿಗೆ ತಿಂಗಳಿಗೆ 15,000 ರೂ. ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.