ರಾಂಚಿ: ಭೂ ಹಗರಣ ಪ್ರಕರಣದಲ್ಲಿ ಮಾಜಿ ಸಿಎಂ ಹೇಮಂತ್ ಸೊರೆನ್ ಬಂಧನ ವಿರೋಧಿಸಿ ಬುಡಕಟ್ಟು ಸಂಘಟನೆಗಳು ಇಂದು ಜಾರ್ಖಂಡ್ ಬಂದ್ಗೆ ಕರೆ ನೀಡಿವೆ.
ಹಲವಾರು ಬುಡಕಟ್ಟು ಸಂಘಟನೆಗಳು ಗುರುವಾರ ಜಾರ್ಖಂಡ್ ಬಂದ್ಗೆ ಕರೆ ನೀಡಿದ್ದು, ರಾಜ್ಯದ ನಾನಾ ಭಾಗಗಳಿಂದ 15-20 ಬುಡಕಟ್ಟು ಸಂಘಟನೆಗಳು ಬಂದ್ನಲ್ಲಿ ಪಾಲ್ಗೊಳ್ಳಲಿವೆ ಎಂದು ಕೇಂದ್ರೀಯ ಸರ್ಣಾ ಸಮಿತಿ ಅಧ್ಯಕ್ಷ ಅಜಯ್ ಟಿರ್ಕಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಟಿರ್ಕಿ, ತನಿಖೆಯಲ್ಲಿ ಇಡಿಗೆ ಸಹಕರಿಸಿದ್ದರೂ, ಹೇಮಂತ್ ಸೊರೆನ್ ಅವರನ್ನು ಬಂಧಿಸಲಾಗಿದೆ. ನಾವು ಈ ಕ್ರಮವನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ಬಂದ್ ವೇಳೆ ಸಾರಿಗೆ ಇತರೆ ಸೇವೆಗಳು ಸ್ಥಗಿತಗೊಳಿಸಲಿದ್ದು, ತುರ್ತು ಸೇವೆಗಳಿಗೆ ಅಡ್ಡಿಯಾಗುವುದಿಲ್ಲ. ಗುರುವಾರ ಶಾಲೆಗಳನ್ನು ತೆರೆದರೆ ನಾವು ತೊಂದರೆ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ(ಇಡಿ) ಜೆಎಂಎಂ ನಾಯಕ ಹೇಮಂತ್ ಸೊರೆನ್ ಅವರನ್ನು ಭೂ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ 7 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ನಂತರ ಬಂಧಿಸಿದೆ. ಬಂಧನಕ್ಕೂ ಮುನ್ನ ಸೋರೆನ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಭವನದಲ್ಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ನಂತರ, ಅವರನ್ನು ರಾಂಚಿಯ ಇಡಿ ಕಚೇರಿಗೆ ಕರೆದೊಯ್ಯಲಾಯಿತು.