ಬಿಜೆಪಿ ವಿರೋಧದ ಮಧ್ಯೆಯೂ ಗುಂಪು ಹಿಂಸಾಚಾರ ತಡೆ ಹಾಗೂ ಗುಂಪು ಹತ್ಯೆ ವಿರೋಧಿ ವಿಧೇಯಕವನ್ನು ಜಾರ್ಖಂಡ್ ಸರ್ಕಾರ ಅಂಗೀಕರಿಸಿದೆ.
ಈ ಮೂಲಕ ದೇಶದಲ್ಲಿ ಈ ವಿಧೇಯಕ ಅಂಗೀಕರಿಸಿದ ಮೂರನೇ ರಾಜ್ಯವಾಗಿ ಜಾರ್ಖಂಡ್ ಹೊರಹೊಮ್ಮಿದೆ. ಈ ಮೊದಲು ರಾಜಸ್ಥಾನ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ವಿಧೇಯಕ ಅಂಗೀಕಾರವಾಗಿತ್ತು. ಗುಂಪು ಹತ್ಯೆ ಹಾಗೂ ಗುಂಪು ಹಿಂಸಾಚಾರ ನಡೆಸುವವರಿಗೆ ತಕ್ಕಶಾಸ್ತಿ ಮಾಡುವ ನಿಟ್ಟಿನಲ್ಲಿ ಈ ವಿಧೇಯಕ ಅಂಗೀಕರಿಸಲಾಗಿದೆ.
ಈ ವಿಧೇಯಕದಂತೆ ಗುಂಪು ಹಿಂಸಾಚಾರ ಹಾಗೂ ಹತ್ಯೆ ಮಾಡುವವರಿಗೆ ಮೂರು ವರ್ಷಗಳಿಂದ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಗುಂಪು ಹತ್ಯೆಗೆ ಸಹಕಾರ ನೀಡುವುದು, ಸುಳ್ಳು ಸಾಕ್ಷಿ ಹೇಳುವುದು, ಮೃತರ ಕುಟುಂಬಗಳಿಗೆ ಬೆದರಿಕೆ ಹಾಕುವವರಿಗೆ ಶಿಕ್ಷೆ ನೀಡುವ ಉದ್ಧೇಶ ಈ ವಿಧೇಯಕದ್ದಾಗಿದೆ.
ಅಲ್ಲದೇ, ಇಂತಹ ಕೃತ್ಯದಲ್ಲಿ ಭಾಗಿಯಾಗುವವರ ಆಸ್ತಿಯನ್ನೂ ಮುಟ್ಟುಗೋಲು ಹಾಕಲಾಗುವುದು ಎಂಬುದನ್ನು ಕೂಡ ಈ ಬಿಲ್ ಹೇಳುತ್ತದೆ. ಈ ವಿಧೇಯಕ ಅಂಗೀಕಾರವಾಗುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ತೀವ್ರ ಪ್ರತಿರೋಧ ಒಡ್ಡಿತು. ಆದರೆ, ಗದ್ದಲದ ಮಧ್ಯೆಯೇ ಅಲ್ಲಿನ ಸರ್ಕಾರ ಈ ವಿಧೇಯಕವನ್ನು ಅಂಗೀಕಾರಗೊಳಿಸಿದೆ.