ಹಾಸ್ಟೆಲ್ ವಾರ್ಡನ್ ದೌರ್ಜನ್ಯದಿಂದ ಇನ್ನಿಲ್ಲದಂತೆ ಕಂಗೆಟ್ಟಿದ್ದ 60ಕ್ಕೂ ಅಧಿಕ ವಿದ್ಯಾರ್ಥಿನಿಯರು ನಡುರಾತ್ರಿಯಲ್ಲಿ 17 ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಜಾರ್ಖಂಡ್ ನ ಖುಂತ್ಪಾನಿ ಕಸ್ತೂರಬಾ ಗಾಂಧಿ ವಸತಿ ನಿಲಯದ ವಿದ್ಯಾರ್ಥಿನಿಯರೇ ಇಂತಹದೊಂದು ದಿಟ್ಟ ನಿರ್ಧಾರ ಕೈಗೊಂಡವರಾಗಿದ್ದು, ಇವರೆಲ್ಲರೂ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಭಾನುವಾರ ರಾತ್ರಿ ವಸತಿ ನಿಲಯದಿಂದ ಹೊರಟ ಈ ವಿದ್ಯಾರ್ಥಿನಿಯರು ಬೆಳಗ್ಗೆ 7 ಗಂಟೆ ಸುಮಾರಿಗೆ ಚೈಬಾಸದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ್ದು, ವಿಷಯ ತಿಳಿದ ಜಿಲ್ಲಾಧಿಕಾರಿ ಅನನ್ಯಾ ಮಿತ್ತಲ್ ಕಚೇರಿಗೆ ಧಾವಿಸಿ ಮನವಿ ಪತ್ರ ಸ್ವೀಕರಿಸಿದ್ದಾರೆ. ಅಲ್ಲದೆ ಜಿಲ್ಲಾ ಶಿಕ್ಷಣಾಧಿಕಾರಿಯನ್ನು ಸ್ಥಳಕ್ಕೆ ಕರೆಸಿಕೊಂಡು ಕೂಡಲೇ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಆದೇಶಿಸಿದ್ದಾರೆ.