
ಕೌಟುಂಬಿಕ ಕಲಹಗಳಲ್ಲಿ ಮಹಿಳೆಯರೇ ಹೆಚ್ಚು ಸಂಕಷ್ಟು ಅನುಭವಿಸುತ್ತಾರೆ ಎಂಬ ಅಭಿಪ್ರಾಯ ಸಾಮಾನ್ಯ. ಅನೇಕ ಸಂದರ್ಭದಲ್ಲಿ ಪುರುಷರೂ ಸಹ ಬಲಿಪಶುಗಳಾಗಿರುತ್ತಾರೆ. ಆದರೆ, ಸಮಾಜ ಅದನ್ನು ಪ್ರಾಮುಖ್ಯವಾಗಿ ಪರಿಗಣಿಸುವುದೇ ಇಲ್ಲ.
ಹೀಗಾಗಿ ಕೌಟುಂಬಿಕ ಕಲಹದಲ್ಲಿ ದೌರ್ಜನ್ಯಕ್ಕೆ ಒಳಗಾದ ಪುರುಷ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಝಾನ್ಸಿಯಲ್ಲಿ ಸಂಸ್ಥೆಯೊಂದು ಹುಟ್ಟಿಕೊಂಡಿದೆ.
“ಮಹಿಳಾ/ಹೆಂಡತಿ ಸಂತ್ರಸ್ತರ ಸಂಘಟನೆ” ಎಂದು ಕರೆಯಲ್ಪಡುವ ಇದು ಝಾನ್ಸಿಯಲ್ಲಿ ಪುರುಷರ ತಂಡದಿಂದ ಪ್ರಾರಂಭವಾಗಿದ್ದು, ಸಂಚಲನವನ್ನು ಸೃಷ್ಟಿಸಿದೆ.
ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಸ್ತ್ರೀಯರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಸಂಸ್ಥೆಗಳಿದ್ದರೂ, ಪುರುಷ ಬಲಿಪಶುಗಳ ಬಗ್ಗೆ ಬಹಳ ಕಡಿಮೆ ಗಮನವನ್ನು ನೀಡಲಾಗಿದೆ. ಈ ಕೊರತೆ ನೀಗಲು ಸಂಸ್ಥೆ ಸ್ಥಾಪಿಸಲಾಗಿದೆ. ಕೌಟುಂಬಿಕ ದೌರ್ಜನ್ಯದಿಂದ ಬಳಲುತ್ತಿರುವ ಪುರುಷರ ಹಕ್ಕುಗಳನ್ನು ರಕ್ಷಿಸಲು ಈ ಸಂಸ್ಥೆ ಕೆಲಸ ಮಾಡಲಿದೆ ಎಂದು ಸಂಘಟಕರು ಹೇಳಿದ್ದಾರೆ.
ಈ ಸಂಘಟನೆಯ ಸಂಸ್ಥಾಪಕ ಅಂಚಲ್ ಅರ್ಜಾರಿಯಾ ಮಾತನಾಡಿ, ಕೆಲ ಸಮಯದ ಹಿಂದೆ ತಾನು ಯಾವುದೋ ಕೆಲಸದ ನಿಮಿತ್ತ ಎಸ್ಎಸ್ಪಿ ಕಚೇರಿಗೆ ತೆರಳಿದ್ದ ವೇಳೆ ಮಹಿಳೆಯೊಬ್ಬರು ಕಚೇರಿಯ ಹೊರಗೆ ಪತಿಯನ್ನು ಅಮಾನುಷವಾಗಿ ಥಳಿಸುತ್ತಿರುವುದನ್ನು ನೋಡಿದ್ದೇನೆ. ಆ ವ್ಯಕ್ತಿಯ ನೆರವಿಗೆ ಯಾರೂ ಮುಂದೆ ಬರಲಿಲ್ಲ ಮತ್ತು ಅಲ್ಲಿದ್ದ ಜನರೂ ಧ್ವನಿ ಎತ್ತಲಿಲ್ಲ ಎಂದು ಹೇಳಿದರು.
ನೊಂದ ವ್ಯಕ್ತಿಯನ್ನು ಮಾತನಾಡಿಸಿದಾಗ ಆತನ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಹಲವು ವರ್ಷಗಳಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು. ಈ ಘಟನೆಯೇ ಸಂಸ್ಥೆಯನ್ನು ರೂಪಿಸಲು ಕಾರಣವಾಯಿತು ಎಂದಿದ್ದಾರೆ.
ತನ್ನ ಪತ್ನಿಯ “ನಕಲಿ” ಪ್ರಕರಣದಿಂದಾಗಿ ತಾನು ಮತ್ತು ನನ್ನ ಕುಟುಂಬವು ಹಲವಾರು ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಯಿತು. ಅವರದ್ದು ಯಾವುದೇ ತಪ್ಪಿಲ್ಲ. ನ್ಯಾಯಾಲಯವು ನಂತರ ಪ್ರಕರಣವನ್ನು ವಜಾಗೊಳಿಸಿದೆ ಎಂದು ಸಂಘಟನೆಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ತಮ್ಮ ಕಥೆಯನ್ನು ಇದೇ ವೇಳೆ ಹಂಚಿಕೊಂಡಿದ್ದಾರೆ.
ಝಾನ್ಸಿಯ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಪ್ರತಿಕ್ರಿಯಿಸಿದ್ದು, ಇತ್ತೀಚೆಗೆ ಪುರುಷರ ವಿರುದ್ಧ ಫೇಕ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅನೇಕ ನೊಂದ ಗಂಡಂದಿರು ಸಹ ದೂರುಗಳೊಂದಿಗೆ ಮಹಿಳಾ ಪೊಲೀಸ್ ಠಾಣೆಗೆ ಬರುತ್ತಾರೆ. ಒಂದು ದಿನದಲ್ಲಿ ಸರಾಸರಿ 10 ಪ್ರಕರಣಗಳಿದ್ದರೆ, ಅವುಗಳಲ್ಲಿ 7 ಮಹಿಳೆಯರು ಬಲಿಪಶುಗಳು ಮತ್ತು 3 ಪುರುಷ ಬಲಿಪಶುಗಳು ಎಂದು ಅವರು ಹೇಳಿದ್ದಾರೆ.