ಉತ್ತರ ಪ್ರದೇಶದ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್‌ಮಾರ್ಟಮ್ ಮನೆಯ ಹೊರಗೆ ಇಟ್ಟಿದ್ದ ಮೃತದೇಹವನ್ನು ಬೀದಿ ನಾಯಿಗಳು ಕಚ್ಚಿ ತಿಂದಿವೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಸಂಚಲನ ಮೂಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ, ಎರಡು ನಾಯಿಗಳು ಪಾಲಿಥಿನ್ ಕವರ್ ನಲ್ಲಿ ತುಂಬಿದ್ದ ದೇಹವನ್ನು ಎಳೆದಾಡುತ್ತಿವೆ. ಮೃತದೇಹವನ್ನು ವೈದ್ಯಕೀಯ ಕಾಲೇಜು ಆವರಣದಲ್ಲಿರುವ ಪೋಸ್ಟ್‌ಮಾರ್ಟಂ ಮನೆಯ ಹೊರಗೆ ಇಡಲಾಗಿತ್ತು. ಅಲ್ಲಿ ಯಾವುದೇ ಕೆಲಸಗಾರ ಕಾಣ್ತಿಲ್ಲ.
ಈ ಘಟನೆಗೆ ಸಂಬಂಧಿಸಿದಂತೆ ಮೃತರ ಗುರುತು ಅಥವಾ ಸಾವಿಗೆ ಕಾರಣಗಳು ಏನು ಎಂಬುದು ಬಹಿರಂಗವಾಗಿಲ್ಲ. ಈ ವಿಚಾರದಲ್ಲಿ ಸಿಎಂಒ ಡಾ.ಸುಧಾಕರ ಪಾಂಡೆ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಶವಗಳನ್ನು ಫ್ರೀಜರ್‌ನಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರಿಗೆ ಶವವನ್ನು ಹಸ್ತಾಂತರಿಸಲಾಗಿದೆ ಎಂದಿದ್ದರು. ಆದ್ರೆ ವಿಡಿಯೋ ನೋಡಿದ ಡಾ. ಸುಧಾಕರ್, ಇದು ತಮ್ಮ ಕಾಲೇಜ್ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ.
ವೈದ್ಯಕೀಯ ಕಾಲೇಜಿನ ನಿರ್ಲಕ್ಷ್ಯದ ಮೊದಲ ಪ್ರಕರಣ ಇದಲ್ಲ. ಈ ಹಿಂದೆಯೂ ಇಲ್ಲಿ ಹಲವು ಬಾರಿ ಇಂಥ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಿವೆ. ಮೃತ ದೇಹದ ಕಾಲನ್ನು ಇಲಿ ತಿಂದ ಪ್ರಕರಣ, ಕಿವಿಯನ್ನು ಇಲಿ ತಿಂದ ಪ್ರಕರಣ ಆಗಾಗ ವರದಿಯಾಗುತ್ತಿರುತ್ತದೆ.