ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನವಾಗಿದೆ. ಜ್ಯುವೆಲ್ಲರಿ ಶಾಪ್ ಮಾಲೀಕನ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೇ ಈ ಕಳ್ಳತನ ಮಾಡಿದ್ದಾನೆ.
ಜ್ಯುವೆಲ್ಲರಿ ಶಾಪ್ ಮಾಲೀಕ ಮುಂಬೈಗೆ ತೆರಳಿದ್ದಾಗ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿದ ಮನೆಯ ಕೆಲಸದವನು ಬರೋಬ್ಬರಿ 4 ಕೆಜಿ ಚಿನ್ನ, 34 ಕೆಜಿ ಬೆಳ್ಳಿ, 9 ಲಕ್ಷದ ನಗದು ದೋಚಿ ಪರಾರಿಯಾಗಿದ್ದಾನೆ.
ಜ್ಯುವೆಲ್ಲರಿ ಶಾಪ್ ಮಾಲೀಕ ಅರವಿಂದ್ ಕುಮಾರ್ ಥಾಡೆ ಅವರ ಮನೆಯಲ್ಲಿ ಎರಡು ತಿಂಗಳ ಹಿಂದೆ ರಾಜಸ್ಥಾನ ಮೂಲದ ಕೇತರಾಮ್ ಕೆಲಸಕ್ಕೆ ಸೇರಿದ್ದ. ಮಾಲೀಕನೊಂದಿಗೆ ಒಳ್ಳೆಯವನಂತೆ ನಟಿಸಿದ್ದ. ಆರ್ಥಿಕ ವ್ಯವಹಾರವನ್ನೂ ಅರಿತಿದ್ದ. ದಸರಾ ಹಬ್ಬದ ಸಂದರ್ಭದಲ್ಲಿ ಅರವಿಂದ್ ಕುಮಾರ್ ಮುಂಬೈಗೆ ತೆರಳುವ ಸಂದರ್ಭದಲ್ಲಿ ಅವರ ಬ್ಯಾಗ್ ನಲ್ಲಿದ್ದ ಬೀಗವನ್ನು ಕೇತರಾಮ್ ಕಳುವು ಮಾಡಿದ್ದಾನೆ. ಬಳಿಕ ತನ್ನದೆ ಊರಿನ ರಾಕೇಶ್ ಎಂಬಾತನನ್ನು ಕರೆಸಿಕೊಂಡು ಮಾಲೀಕನ ಜ್ಯುವೆಲ್ಲರಿ ಶಾಪ್ ನ ಬಾಗಿಲು ತೆರೆದು ಕಳ್ಳತನ ಮಾಡಿದ್ದಾರೆ.
ಅಂಗಡಿಯಲ್ಲಿ ಕಳ್ಳತನಾಗಿರುವ ಬಗ್ಗೆ ಅರವಿಂದ್ ಪುತ್ರನಿಗೆಸ್ಥಳೀಯರು ಮಾಹಿತಿ ನೀಡಿದ್ದು, ಅರವಿಂದ್ ಮಗ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.