
ಭಾರತೀಯ ಮೆಟ್ರೋ ನಿಲ್ದಾಣಗಳ ಸೌಂದರ್ಯ ಮತ್ತು ವಾಸ್ತುಶಿಲ್ಪದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿರುವ ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಂಜೀವ್ ಕಪೂರ್ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ವೀಟ್‌ನಲ್ಲಿ ಸಂಜೀವ್ ಕಪೂರ್ ಭಾರತದ ಮೂಲಸೌಕರ್ಯವನ್ನು ದುಬೈನೊಂದಿಗೆ ಹೋಲಿಸಿ, ಭಾರತೀಯ ಮೆಟ್ರೋ ನಿಲ್ದಾಣಗಳನ್ನು “ಕಲಾರಹಿತ ಕಾಂಕ್ರೀಟ್ ಕಣ್ಣುಗಳು” ಎಂದು ಕರೆದಿದ್ದಾರೆ. ಇದು ಹಲವು ಟ್ವಿಟ್ಟರ್ ಬಳಕೆದಾರರನ್ನು ಕೆರಳಿಸಿದೆ.
ಭಾರತ ಮತ್ತು ದುಬೈಗೆ ಹೋಲಿಕೆಯನ್ನು ಚಿತ್ರಿಸುತ್ತಾ, ”ಬೆಂಗಳೂರು, ಗುರ್ಗಾಂವ್, ಕೋಲ್ಕತ್ತಾ…… ನಮ್ಮ ನೆಲದ ಮೇಲಿನ/ ಓವರ್ ಹೆಡ್ ಮೆಟ್ರೋ ನಿಲ್ದಾಣಗಳು ಏಕೆ ಅಂತಹ ಕಲೆಯಿಲ್ಲದ ಕಾಂಕ್ರೀಟ್ ಕಣ್ಣುಗಳು? ಬೆಂಗಳೂರಿಗೆ ಹೋಲಿಸಿದರೆ ದುಬೈಯನ್ನು ಒಮ್ಮೆ ನೋಡಿ. ಈ ದುಬೈ ನಿಲ್ದಾಣವನ್ನು ಬಹುಶಃ 10 ವರ್ಷಗಳ ಹಿಂದೆ ನಿರ್ಮಿಸಲಾಗಿದೆ! ” ಎಂದು ದುಬೈ ಮತ್ತು ಬೆಂಗಳೂರು ಮೆಟ್ರೋ ನಿಲ್ದಾಣಗಳ ಚಿತ್ರಗಳನ್ನ ಹಂಚಿಕೊಂಡಿದ್ದರು.
ಅವರ ಹೇಳಿಕೆಯನ್ನು ಟೀಕಿಸಿದ ಬಹಳಷ್ಟು ಟ್ವಿಟ್ಟರ್ ಬಳಕೆದಾರರು “ತಮ್ಮ ದೇಶವನ್ನು ಮೆಚ್ಚದವರ ವಿಶಿಷ್ಟ ಪ್ರತಿಕ್ರಿಯೆ,” ಎಂದು ಸಂಜೀವ್ ಕಪೂರ್ ಅವರನ್ನ ಟೀಕಿಸಿದ್ದಾರೆ.
ಅನೇಕರು ತಮ್ಮ ಅಭಿಪ್ರಾಯವನ್ನು ಸಾಬೀತುಪಡಿಸಲು ದೇಶಾದ್ಯಂತ ಸುಂದರವಾಗಿ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ ಹಲವಾರು ಮೆಟ್ರೋ ನಿಲ್ದಾಣಗಳ ಚಿತ್ರಗಳನ್ನು ಹಂಚಿಕೊಂಡಿದ್ದು ಜೆಟ್ ಏರ್ ವೇಸ್ ನ ಸಿಇಓಗೆ ತಿರುಗೇಟು ನೀಡಿದ್ದಾರೆ.