ಜೆಟ್ ಏರ್ವೇಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಂಜೀವ್ ಕಪೂರ್ ಅವರ ಟ್ವಿಟರ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಕಮೆಂಟ್ ಮಾಡಿ 2019 ರಲ್ಲಿ ಕ್ಯಾನ್ಸಲ್ ಆಗಿರುವ ತನ್ನ ವಿಮಾನದ ಟಿಕೆಟ್ನ ಹಣ ಮರುಪಾವತಿಯನ್ನು ಕೇಳಿರುವ ಘಟನೆ ನಡೆದಿದೆ.
ಪಿಯೂಷ್ ತ್ರಿವೇದಿ ಎನ್ನುವವರು ಮಾಡಿದ್ದ ಕಮೆಂಟ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಸಾವಧಾನವಾಗಿ ಉತ್ತರ ನೀಡಿದ್ದಾರೆ ಸಂಜೀವ್ ಕಪೂರ್. ಈ ಸಂದರ್ಭದಲ್ಲಿ ಟ್ವಿಟರ್ನ ಬ್ಲೂಟಿಕ್ಗೆ ಎಲಾನ್ ಮಸ್ಕ್ ಶುಲ್ಕವನ್ನು ನಿಗದಿ ಮಾಡಿರುವ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ. ಟ್ವಿಟರ್ ಅನ್ನು ಉದ್ಯಮಿ ಎಲಾನ್ ಮಸ್ಕ್ ಖರೀದಿ ಮಾಡಿದ ಬಳಿಕ ಅವರು, ಟ್ವಿಟರ್ನ ಬ್ಲೂಟಿಕ್ಗೆ ಕೆಲವೊಂದು ಶುಲ್ಕವನ್ನು ನಿಗದಿ ಮಾಡಿದ್ದು, ಅದರ ವಿಷಯವನ್ನು ಕಪೂರ್ ಪ್ರಸ್ತಾಪಿಸಿದ್ದಾರೆ.
“ಇದು ಅತ್ಯಂತ ಅರ್ಥಹೀನ ಎಂದು ಭಾವಿಸುವವರಲ್ಲಿ ನಾನೂ ಒಬ್ಬ. ಈ ರೀತಿ ಶುಲ್ಕ ನಿಗದಿ ಮಾಡಿರುವುದು ಸರಿಯಲ್ಲ. ಇದೇನು ರಾಕೆಟ್ ವಿಜ್ಞಾನವಲ್ಲ” ಎಂದಿದ್ದಾರೆ. ಇದಕ್ಕೆ ಟಿಕೆಟ್ ಮರುಪಾವತಿಯ ಬಗ್ಗೆ ಹೇಳಿದ್ದ ಪಿಯೂಷ್ ತ್ರಿವೇದಿ ಅವರು, “ಟ್ವಿಟರ್ ಭಾಷಣ ನನಗೆ ಬೇಡ, ನನಗೆ ನನ್ನ ಹಣ ವಾಪಸ್ ಕೊಡಿ” ಎಂದಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿದ ಸಂಜೀವ್ ಕಪೂರ್, “ಧನ್ಯವಾದಗಳು” ಎಂದು ಹೇಳುವ ಮೂಲಕ, “ನಾನು ನಿಮಗೆ ವೈಯಕ್ತಿಕವಾಗಿ ಹಣ ನೀಡಬೇಕಾಗಿಲ್ಲ, ನಾನು ಜೆಟ್ 1.0 ನ ಭಾಗವೂ ಅಲ್ಲ” ಎಂದಿದ್ದಾರೆ. ಅಷ್ಟೇ ಅಲ್ಲದೇ, ಈ ರೀತಿ ಟಿಕೆಟ್ ರದ್ದಾದ ಬಳಿಕ ಏನು ಮಾಡಬೇಕು ಎಂದು ಬಗ್ಗೆ ಷರತ್ತು ಮತ್ತು ನಿಬಂಧನೆಗಳನ್ನು ಮೊದಲೇ ತಿಳಿಸಲಾಗಿರುತ್ತದೆಯಲ್ಲವೆ? ಅದನ್ನು ನೀವು ಫಾಲೋ ಮಾಡಿರುವಿರಾ? ಮಾಡಿದ್ದರೆ ಹೇಳಿ ಎಂದಿದ್ದಾರೆ.
ಈ ಸಂದೇಶಕ್ಕೆ ಇದುವರೆಗೆ ಯಾವುದೇ ಉತ್ತರ ಕೊಡದ ಪಿಯೂಷ್ ತ್ರಿವೇದಿ ಮೌನಕ್ಕೆ ಜಾರಿದ್ದಾರೆ.