ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ನಿರಂತರವಾಗಿದೆ. ಪೆಟ್ರೋಲ್-ಡಿಸೇಲ್, ಸಿಲಿಂಡರ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗ್ತಿದೆ. ಈ ಮಧ್ಯೆ ಹತ್ತಿ ಬೆಲೆ ಏರಿಕೆ, ಬಟ್ಟೆ ಮೇಲಾಗಲಿದೆ. ನಿರಂತರವಾಗಿ ಹತ್ತಿ ಬೆಲೆ ಏರಿಕೆಯಾಗ್ತಿದ್ದು, ಅನೇಕ ಕಂಪನಿಗಳು ರೆಡಿಮೇಡ್ ಬಟ್ಟೆ ಬೆಲೆ ಏರಿಕೆಗೆ ಮುಂದಾಗಿವೆ.
ಇಂಡಿಯನ್ ಟೆರೈನ್ ಮತ್ತು ರೇಮಂಡ್ ಯುಸಿಒ ಡೆನಿಮ್ ನಂತಹ ಕಂಪನಿಗಳು ಬೆಲೆ ಏರಿಕೆಗೆ ಮುಂದಾಗಿವೆ. ಈಗಾಗಲೇ ಅನೇಕ ಕಂಪನಿಗಳು ಒಳ ಉಡುಪುಗಳ ಬೆಲೆ ಹೆಚ್ಚಿಸಿವೆ.
ಎನಾಮೋರ್‌ನ ಸಿಇಒ ಶೇಖರ್ ತಿವಾರಿ, ಹತ್ತಿ ಮತ್ತು ನೂಲಿನ ಬೆಲೆ ಏರಿಕೆಯ ನಂತ್ರ ಕಂಪನಿ, ಒಳ ಉಡುಪುಗಳ ಬೆಲೆಯನ್ನು ಹೆಚ್ಚಿಸಿದೆ ಎಂದಿದ್ದಾರೆ. ಕೊರೊನಾದಿಂದಾಗಿ ಬಟ್ಟೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಈ ಮಧ್ಯೆ ಕಳೆದ ಒಂದು ವರ್ಷದಿಂದ ಹತ್ತಿ ಬೆಲೆಯಲ್ಲಿ ಏರಿಕೆಯಾಗ್ತಿದೆ. ಇದು ಬಟ್ಟೆ ತಯಾರಕರ ಮೇಲೆ ದೊಡ್ಡ ಪರಿಣಾಮ ಬೀರಿದೆ. ಆದ್ರೆ ಹಬ್ಬದ ಋತುವಿನಲ್ಲಿ ಬಟ್ಟೆಗೆ ಬೇಡಿಕೆ ನಿಧಾನವಾಗಿ ಹೆಚ್ಚಾಗ್ತಿದೆ.
ಇನ್ನು ನಾಲ್ಕು ತಿಂಗಳವರೆಗೆ ಬಟ್ಟೆ ಬೆಲೆ ಏರಿಸುವ ಆಲೋಚನೆಯಿಲ್ಲ. ಒಂದು ವೇಳೆ ಆ ನಂತ್ರವೂ ಹತ್ತಿ ಬೆಲೆಯಲ್ಲಿ ಇಳಿಕೆ ಕಂಡು ಬರದೆ ಹೋದಲ್ಲಿ ಬೆಲೆ ಏರಿಕೆ ಅನಿವಾರ್ಯವೆಂದು ಇಂಡಿಯನ್ ಟೆರೈನ್ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
ಕಡಿಮೆ ಬೇಡಿಕೆ ಹಿನ್ನಲೆಯಲ್ಲಿ ಈವರೆಗೆ ಬೆಲೆ ಏರಿಕೆ ಮಾಡಿರಲಿಲ್ಲ. ಆದ್ರೆ ಇನ್ಮುಂದೆ ಬೆಲೆ ಏರಿಕೆ ಅನಿವಾರ್ಯವೆಂದು ರೇಮಂಡ್ ಯುಸಿಒ ಡೆನಿಮ್ ನ ಸಿಇಒ ಹೇಳಿದ್ದಾರೆ. ಡೆಮಿನ್ ಟೀ ಶರ್ಟ್ ನಲ್ಲಿ ಶೇಕಡಾ 40-50ರಷ್ಟು ಹತ್ತಿಯಿರುತ್ತದೆ.