ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದೆ. ಈ ನಡುವೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಘಟಕ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.
ಮೂರ್ಖರಿಗೆ ಬುದ್ಧಿ ಮಂದ ಎಂಬ ಮಾತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಿದ್ದೂ ಅದೇ. ಅಧಿಕಾರದ ಮದದಿಂದ ಅವರ ಮೆದುಳಿಗೆ ಗೆದ್ದಲು ಹಿಡಿದಿದೆ. ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಮನೆಗೆ ಸರ್ಕಾರ ರಚನೆ ಮಾಡಲು ಕುಮಾರಸ್ವಾಮಿ ಬಂದಿದ್ದರಾ? ಸುಳ್ಳು ಹೇಳಲು ಸಾಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ? ಎಂದು ಪ್ರಶ್ನಿಸಿದೆ.
ಡಿ.ಕೆ.ಶಿವಕುಮಾರ್ ಅವರದ್ದು ಕೈ ಎತ್ತುವುದರಲ್ಲಿ ಅಷ್ಟೇ ಅಲ್ಲ ಕೈ ಕೊಡುವುದರಲ್ಲಿಯೂ ಎತ್ತಿದ ಕೈ. ಕುಮಾರಸ್ವಾಮಿಯವರಿಗೆ ಗೊತ್ತಾಗಲಿಲ್ಲ. ಅವರು ಕೈ ಅಭಯದ ಸಂಕೇತವೆಂದು ನಂಬಿದ್ದರು. ಆದರೆ ಡಿ.ಕೆ.ಶಿವಕುಮಾರ್ ಅಸೆಂಬ್ಲಿಯಲ್ಲಿ ಕೈ ಎತ್ತಿದರು, ಮಂಡ್ಯದಲ್ಲಿ ಕೈ ಎತ್ತಿದರು, ಬೆಂಗಳೂರು ಗ್ರಾಮಾಂತರದಲ್ಲಿ ಕೈ ಎತ್ತಿದರು. ಇದನ್ನು ಕುಮಾರಸ್ವಾಮಿ ನಂಬಿ ಬೆಂಗಳೂರು ಗ್ರಾಮಾಂತರದಲ್ಲಿ ಅವರ ಕೈ ಹಿಡಿದರು. ಮಂಡ್ಯದಲ್ಲಿ ಅದೇ ಕೈ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಜಾರಿಕೊಂಡಿತು ಎಂದು ಜೆಡಿಎಸ್ ಕಿಡಿಕಾರಿದೆ.