ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ರಣಕಹಳೆ ಮೊಳಗಿಸಲು ಸಜ್ಜಾಗಿದ್ದು, ಇಂದು ಕೋಲಾರ ಜಿಲ್ಲೆ ಮುಳಬಾಗಿಲು ಹೊರವಲಯದಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸಲಾಗಿದೆ.
ಪಂಚರತ್ನ ರಥಯಾತ್ರೆ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗುವುದು. ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಜಿ.ಟಿ. ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ನವೆಂಬರ್ 22 ರವರೆಗೆ ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಸಂಚರಿಸಲಿದೆ. ಜೆಡಿಎಸ್ ಸಮಾವೇಶಕ್ಕೆ ಎರಡು ಲಕ್ಷ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇಂದಿನ ಸಮಾವೇಶದಲ್ಲಿ 100 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ಇಂದು ಹೆಚ್.ಡಿ. ಕುಮಾರಸ್ವಾಮಿ ಇಂದು ಬಟ್ಲಬಾವನಹಳ್ಳಿಯಲ್ಲಿ ವಾಸ್ತವ ಹೂಡಲಿದ್ದು, ನವೆಂಬರ್ 18ರಂದು ಮುಳಬಾಗಿಲು, 19ರಂದು ಬಂಗಾರಪೇಟೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ನವೆಂಬರ್ 20ರಂದು ಮಾಲೂರು, 21 ರಂದು ಕೋಲಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 22ರಂದು ಶ್ರೀನಿವಾಸಪುರದಲ್ಲಿ ಪಂಚರತ್ನ ರಥಯಾತ್ರೆ ಸಮಾವೇಶ ನಡೆಯಲಿದೆ.