ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರ ಜೋರಾಗಿದ್ದು ಮೂರು ಪ್ರಬಲ ಪಕ್ಷಗಳು ಅಬ್ಬರದ ಕ್ಯಾಂಪೇನ್ ಮಾಡ್ತಿವೆ. ಜೆಡಿಎಸ್ ನಿಂದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಪ್ರಚಾರದ ಅಖಾಡಕ್ಕಿಳಿದಿದ್ದು
ಮುಂದಿನ 11 ದಿನಗಳಲ್ಲಿ 42 ಸ್ಥಳಗಳಲ್ಲಿ ತಮ್ಮ ಪಕ್ಷದ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.
89 ವರ್ಷ ವಯಸ್ಸಿನ ದೇವೇಗೌಡರು ತಮ್ಮ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಚಾರದ ವೇಳೆ ವಾರಕ್ಕೊಮ್ಮೆ ವಿಶ್ರಾಂತಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಶುಕ್ರವಾರದಿಂದ ಮೇ 8ರವರೆಗೆ 42 ಸ್ಥಳಗಳಲ್ಲಿ ಪ್ರಚಾರ ನಡೆಸುತ್ತೇನೆ. ಇದೊಂದು ತಾತ್ಕಾಲಿಕ ಕಾರ್ಯಕ್ರಮ. ನಾನು ವಾರಕ್ಕೊಮ್ಮೆ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಾರಕ್ಕೊಮ್ಮೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ಮೇ 18 ರಂದು 90 ನೇ ವರ್ಷಕ್ಕೆ ಕಾಲಿಡಲಿರುವ ದೇವೇಗೌಡರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜೆಡಿಎಸ್ ಪಕ್ಷವು 211 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದರಲ್ಲಿ ಇಬ್ಬರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಮತ್ತು ಇಬ್ಬರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದರು. ಹೀಗಾಗಿ 207 ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ.