ಬೆಂಗಳೂರು: ಜೆಡಿಎಸ್ ಉಚ್ಛಾಟಿತ ನಾಯಕರು ದಳಪತಿಗಳ ವಿರುದ್ಧವೇ ತೊಡೆತಟ್ಟಿದ್ದು, ಜೆಡಿಎಸ್ ಪಕ್ಷವನ್ನು ಇಬ್ಭಾಗವನ್ನಾಗಿ ಮಾಡಿ ತಮ್ಮದೇ ರಾಷ್ಟ್ರಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ.
ಜೆಡಿಎಸ್ ನಿಂದ ಉಚ್ಛಾಟನೆಗೊಂಡ ನಾಯಕರು, ಅಸಮಾಧಾನಿತರು ಇಂದು ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಬೆಂಗಳೂರಿನ ಕೆ.ಜಿ.ಹಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ಅವರನ್ನು ನೇಮಕ ಮಾಡಲಾಗಿದೆ ಎಂದು ಘೋಷಿಸಲಾಯಿತು.
ಈ ವೇಳೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ಜೆಡಿಎಸ್ ರಾಷ್ಟ್ರೀಯ ಅದ್ಯಕ್ಷರನ್ನಾಗಿ ಸಿ.ಕೆ.ನಾಣು ಅವರನ್ನು ನೇಮಿಸಲಾಗಿದೆ. ಇದು ನನ್ನ ನಿರ್ಣಯವಲ್ಲ, ರಾಷ್ಟ್ರೀಯ ಕೌನ್ಸಿಲ್ ನಿರ್ಣಯವಾಗಿದೆ. ಇದೇ ನಿಜವಾದ ಜೆಡಿಎಸ್. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಪತ್ರ ಬರೆಯುತ್ತೇವೆ ಎಂದರು.
ನಾವೆಲ್ಲರೂ ನಿತೀಶ್ ಕುಮಾರ್ ಹಾಗೂ ಲಾಲು ಪ್ರಸಾದ್ ಯಾದವ್ ಭೇಟಿಗೆ ತೆರಳುತ್ತಿದ್ದೇವೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡುತ್ತಿದ್ದೇವೆ. ಸಮಾವೇಶಕ್ಕೆ ಅಖಿಲೇಶ್ ಯಾದವ್, ನಿತೀಶ್ ಕುಮಾರ್, ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗುವುದು ಎಂದರು.
ಇದೇ ವೇಳೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌದ ವಿರುದ್ಧ ಗುಡುಗಿದ ಇಬ್ರಾಹಿಂ, ಮಕ್ಕಳ ಹಿತ, ಎರಡು ಸೀಟ್ ಗಾಗಿ ಪಕ್ಷದ ಸಿದ್ಧಾಂತವನ್ನೇ ಬಲಿಕೊಟ್ಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನಾವು ಮೂರು ಅವಕಾಶವನ್ನು ಕೊಟ್ಟೆವು. ಅಂತಿಮವಾಗಿ ಇಂದು ದೇವೇಗೌಡರನ್ನು ಅಧ್ಯಕ್ಷಗಿರಿಯಿಂದ ತೆಗೆದುಹಾಕಿದ್ದೇವೆ. ನಾಣು ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇವೆ. ನಮ್ಮ ಬಳಿ 5 ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ.