ಯಾದಗಿರಿ: ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬಹಿರಂಗವಾಗಿ ವಿರೋಧಿಸಿದ್ದು, ಈ ಮಧ್ಯೆ ಶಾಸಕರು ಆಪರೇಷನ್ ಹಸ್ತ ಗಾಳಕ್ಕೆ ಸಿಲುಕಿದ್ರಾ? ಎಂಬ ಕುತೂಹಲ ಮೂಡಿದೆ.
ಶಾಸಕ ಶರಣಗೌಡ ಕಂದಕೂರು ಅವರ ಕಚೇರಿಯನ್ನು ಸಚಿವ ದರ್ಶನಾಪುರ ಉದ್ಘಾಟನೆ ಮಾಡಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿದೆ. ಗುರುಮಿಠಕಲ್ ನಲ್ಲಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರ ಜನ ಸಂಪರ್ಕ ಕಚೇರಿಯನ್ನು ಕಾಂಗ್ರೆಸ್ ಸರ್ಕಾರದ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಶಾಸಕ ಕಂದಕೂರು, ಈ ಮೈತ್ರಿಗೆ ತಮ್ಮ ಒಪ್ಪಿಗೆ ಇಲ್ಲ. ಒಂದು ವೇಳೆ ವರಿಷ್ಠರು ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾದರೆ ಕ್ಷೇತ್ರದ ಜನಾಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಈ ಹಿಂದೆಯೇ ಹೇಳಿದ್ದರು. ಈ ಬೆಳವಣಿಗೆ ಬಳಿಕ ಈಗ ಸಚಿವ ದರ್ಶನಾಪುರ ಅವರಿಂದ ತಮ್ಮ ಜನ ಸಂಪರ್ಕ ಕಚೇರಿ ಉದ್ಘಾಟಿಸಿರುವುದು ಶರಣಗೌಡ ಕಂದಕೂರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗೆ ಇನ್ನಷ್ಟು ಇಂಬು ನೀಡುವಂತಿದೆ.