ಬೆಂಗಳೂರು: ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಮತ್ತು ಅವರ ಪತ್ನಿ ಭವಾನಿ ರೇವಣ್ಣ ಸೇರಿ 9 ಆರೋಪಿಗಳಿಗೆ ಆಗಸ್ಟ್ 28 ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಪ್ರಕರಣದಲ್ಲಿ ಬಂಧಿರಾಗಿರುವ ಸತೀಶ್ ಬಾಬು, ಮನು ಗೌಡ, ಕೆ.ಎ. ರಾಜಗೋಪಾಲ್, ಹೆಚ್. ಕೆ. ಸುಜಯ್, ಹೆಚ್.ಎನ್. ಮಧು, ಎಸ್.ಟಿ. ಕೀರ್ತಿ, ಅಜಿತ್ ಕುಮಾರ್ ಅವರಿಗೆ ಐಪಿಸಿ ಸೆಕ್ಷನ್ 364 ಎ ಕೈಬಿಟ್ಟು ಉಳಿದ ಆರೋಪಿಗಳಿಗೆ ಸಮನ್ಸ್ ನೀಡಲಾಗಿದೆ.
ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ಪ್ರಶ್ನಿಸಿ ಎಸ್ಐಟಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಚಾರಣೆ ಎದುರಿಸಬೇಕೆಂದು ಹೇಳಿತ್ತು.
ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪಗಳಿವೆ. ಮಗ ತಪ್ಪು ಮಾಡಿದರೆ ತಾಯಿಯ ಪಾತ್ರವೇನು ಎಂದು ಎಸ್ಐಟಿ ಪರ ವಕೀಲ ಕಪಿಲ್ ಸಿಬಲ್ ಗೆ ನ್ಯಾಯಪೀಠ ಪ್ರಶ್ನೆ ಮಾಡಿತ್ತು.
ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ್ದ ಕಪಿಲ್ ಸಿಬಲ್, ಅತ್ಯಾಚಾರ ಪ್ರಕರಣದ ಸಂರಸ್ತೆಯನ್ನು ಅಪಹರಿಸಿದ ಆರೋಪ ಭವಾನಿ ರೇವಣ್ಣ ಅವರ ಮೇಲಿದೆ ಎಂದು ವಾದಿಸಿದ್ದು, ಅವರ ವಾದ ಆಲಿಸಿದ ನ್ಯಾಯಮೂರ್ತಿಗಳು ಭವಾನಿಯವರು ಆರೋಪದಿಂದ ಮುಕ್ತ ಎನ್ನುವಂತಿಲ್ಲ, ಅವರು ವಿಚಾರಣೆ ಎದುರಿಸಬೇಕು ಎಂದು ಅಭಿಪ್ರಾಯಪಟ್ಟು ನೋಟಿಸ್ ಜಾರಿಗೊಳಿಸಿತ್ತು.