ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮುಂದುವರೆದಿದ್ದು, ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ಭಾಗಿಯಾಗಿದ್ದಾರೆ.
ಬೆಳಗ್ಗೆ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ನಡೆದ ಪಾದಯಾತ್ರೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಭಾಗಿಯಾಗಿದ್ದರು. ಜೆಡಿಎಸ್ ಪಕ್ಷದ ಉಚ್ಛಾಟಿತ ಶಾಸಕ ಶ್ರೀನಿವಾಸ್ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದರು.
ಸಂಜೆ ಜೆಡಿಎಸ್ ಪಕ್ಷದಿಂದ ದೂರವಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಆರ್. ಮನೋಹರ್ ಭಾಗಿಯಾಗಿದ್ದಾರೆ. ಪಾದಯಾತ್ರೆ ಕೊನೆಯಲ್ಲಿ ತುರುವೇಕೆರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್ ನಡೆಸಿದ್ದಾರೆ.
ಸಿ.ಆರ್. ಮನೋಹರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವೇದಿಕೆಗೆ ಕರೆತಂದಿದ್ದಾರೆ. ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಸಿ.ಆರ್. ಮನೋಹರ್ ಜೆಡಿಎಸ್ ಪಕ್ಷವನ್ನು ತೊರೆದಿದ್ದಾರೆ. ಮನೋಹರ್ ಅವರನ್ನು ಕರೆದುಕೊಂಡು ಬಂದ ಡಿಕೆಶಿ ವೇದಿಕೆ ಮೇಲೆ ನಿಲ್ಲಿಸಿದ್ದಾರೆ. ಮನೋಹರ್ ಸಾಲಿನಲ್ಲಿ ಶಾಸಕ ರಂಗನಾಥ್ ಅವರೂ ಇದ್ದಾರೆ. ಈ ಮೂಲಕ ಜೆಡಿಎಸ್ ನಿಂದ ದೂರವಾಗಿರುವ ಗುಬ್ಬಿ ಶಾಸಕ ಶ್ರೀನಿವಾಸ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಆರ್. ಮನೋಹರ್ ಕಾಂಗ್ರೆಸ್ ಸೇರುವುದು ಖಚಿತವೆನ್ನಲಾಗಿದೆ.