ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್ ನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಭಾರೀ ಲಾಬಿ ನಡೆಯುತ್ತಿದೆ ಎನ್ನಲಾಗಿದೆ. ಅದರಲ್ಲೂ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಭರ್ಜರಿ ಗೆಲುವಿನಿಂದ ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ತಮ್ಮ ತಾಯಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಕೊಡಿಸಲು ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಗ್ಗೆ ಚರ್ಚಿಸಲು ಮೇ 25 ರಂದು ಕರೆದಿರುವ ಸಭೆಗೆ ಮುಂಚಿತವಾಗಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಕ್ಷೇತ್ರದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.
ಪ್ರಜ್ವಲ್ ರೇವಣ್ಣ ಇತ್ತೀಚೆಗೆ ಹಾಸನದ ಮುಖಂಡರ ಜತೆ ಔತಣಕೂಟ ನಡೆಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಸನದ ಮುಖಂಡರು ಭವಾನಿ ರೇವಣ್ಣ ಅಥವಾ ಪ್ರಜ್ವಲ್ ಹೆಸರನ್ನು ಒತ್ತಾಯಿಸುತ್ತಿದ್ದು, ಅಂತಿಮವಾಗಿ ದೇವೇಗೌಡರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಹಾಸನ ನಗರ ವಿಧಾನಸಭಾ ಕ್ಷೇತ್ರವನ್ನು ಮರುಪಡೆದಿರುವುದು ಈ ವರ್ಷ ಜೆಡಿಎಸ್‌ಗೆ ದೊಡ್ಡ ಗೆಲುವು ಮತ್ತು ರೇವಣ್ಣ ಕುಟುಂಬವು ಅದರ ಕ್ರೆಡಿಟ್ ಪಡೆಯುತ್ತಿದೆ. ದೇವೇಗೌಡರ ಜತೆಗಿನ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
ಭವಾನಿ ಅವರು ಹಾಸನ ವಿಧಾನಸಭಾ ಟಿಕೆಟ್ ಕೇಳಿದಾಗ ಭವಿಷ್ಯದಲ್ಲಿ ಅವರಿಗೆ ಉತ್ತಮ ಹುದ್ದೆ ನೀಡುವ ಭರವಸೆಯನ್ನು ದೇವೇಗೌಡರು ನೀಡಿದ್ದರು. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೇಳಬಹುದೆಂದು ತಾಳೆ ಹಾಕಲಾಗುತ್ತಿದೆ ಎನ್ನಲಾಗಿದೆ. ಪಕ್ಷದ ಸೋಲಿನ ಹಿನ್ನಲೆಯಲ್ಲಿ ಸಿ.ಎಂ. ಇಬ್ರಾಹಿಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಆ ಅವಕಾಶ ಪಡೆದುಕೊಳ್ಳುವ ಲೆಕ್ಕಾಚಾರ ಈ ಬೆಳವಣಿಗೆ ಹಿಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.