ಬೆಂಗಳೂರು: ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಇಂತಹ ಯಾವುದೇ ಚರ್ಚೆಯೇ ಸರ್ಕಾರದಲ್ಲಿ ನಡೆದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಈ ನಡುವೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ನಿರ್ಮಾ ಣ ಸ್ವಾಗತಾರ್ಹ ಎಂದಿದ್ದಾರೆ.
ನೆಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ಆರಂಭಿಸಿದರೆ ಒಳ್ಳೆಯ ಬೆಳವಣಿಗೆ. ಮುಸ್ಲಿಂ ಹೆಣ್ಣುಮಕ್ಕಳು ಕೂಡ ನಮ್ಮ ಕರ್ನಾಟಕದ ಹೆಣ್ಣುಮಕ್ಕಳಲ್ಲವೇ? ಅವರ ವಿದ್ಯಾಭ್ಯಾಸಕ್ಕಾಗಿ ಪ್ರತ್ಯೇಕ ಕಾಲೇಜು ಸ್ಥಾಪಿಸಿದರೆ ಒಳ್ಳೆಯದು. ಈ ನಿಟ್ಟಿನಲ್ಲಿ ವಕ್ಫ್ ಬೋರ್ಡ್, ಸರ್ಕಾರ ಯೋಚಿಸಿದ್ದರೆ ಸ್ವಾಗತಾರ್ಹ ಎಂದರು.
ಇದೇ ವೇಳೆ ಜೆಡಿಎಸ್ ಪಂಚರತ್ನ ರಥಯಾತ್ರೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಇಂದಿಗೆ ಬೆಂಗಳೂರು ಗ್ರಾಮಾಂತರ ಪ್ರವಾಸ ಮುಗಿದಿದೆ. ತುಮಕೂರಿನಲ್ಲಿ ಇಂದು ರಥಯಾತ್ರೆ ಆರಂಭವಾಗಲಿದೆ ಎಂದು ಹೇಳಿದರು.