ಬೆಂಗಳೂರು: ಜೆಡಿಎಸ್ ಜಿಲ್ಲಾ ಮುಖಂಡನ ಸೋಗಿನಲ್ಲಿ ಕೊಲ್ಕತ್ತಾ ಯುವತಿಗೆ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿ ವಂಚಿಸಿದ ಆರೋಪದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಜೆಡಿಎಸ್ ಮುಖಂಡ ಜಿ.ಕೆ. ಗೌಡ ಎಂಬುವನ ವಿರುದ್ಧ ಕೊಲ್ಕತ್ತಾ ಮೂಲದ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಲೈವ್ ಬ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ 8 ವರ್ಷಗಳ ಹಿಂದೆ ಜಿ.ಕೆ. ಗೌಡ ಪರಿಚಿತನಾಗಿದ್ದ. ಉತ್ತರ ಕನ್ನಡ ಜಿಲ್ಲೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂದು ಪರಿಚಯಿಸಿಕೊಂಡಿದ್ದು, ಇಬ್ಬರ ನಡುವೆ ಗೆಳೆತನವಾಗಿ ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ ಆರೋಪಿ ಮೂರು ಬಾರಿ ಗರ್ಭಪಾತ ಮಾಡಿಸಿದ್ದಾನೆ. ವಿವಿಧ ನೆಪ ಹೇಳಿ 20 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ದೂರು ನೀಡಿದ್ದಾರೆ.
ವಂಚನೆಗೊಳಗಾದ ಯುವತಿ ಮೂರು ತಿಂಗಳಿನಿಂದ ಜಿ.ಕೆ. ಗೌಡನಿಗೆ ಕರೆ ಮಾಡಿದರೂ, ಸ್ವೀಕರಿಸುತ್ತಿಲ್ಲ. ಆತನ ಸ್ನೇಹಿತರು ಯುವತಿಗೆ ಕರೆ ಮಾಡಿ ಅಸಹ್ಯವಾಗಿ ಮಾತನಾಡುತ್ತಿದ್ದಾರೆ. ಮಹಿಳಾ ಸಂಘಟನೆಗಳ ಸಹಾಯದಿಂದ ಆರೋಪಿ ಮನೆಗೆ ತೆರಳಿ ನ್ಯಾಯ ಕೇಳಿದಾಗ ಗಲಾಟೆಯಾಗಿದೆ. ಬಳಿಕ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.