ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಮೇಯರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ. ಜೆಡಿಎಸ್ ಬೆಂಬಲವಿಲ್ಲದೆ ಕಾಂಗ್ರೆಸ್ ಅಥವಾ ಬಿಜೆಪಿಗೆ ಅಧಿಕಾರ ರಚಿಸಲು ಸಾಧ್ಯವಿಲ್ಲ. 55 ಸ್ಥಾನಗಳ ಕಲಬುರ್ಗಿಯ ಮಹಾನಗರಪಾಲಿಕೆಯಲ್ಲಿ ನಾಲ್ಕು ಸ್ಥಾನ ಗೆದ್ದಿರುವ ಜೆಡಿಎಸ್ ಬೆಂಬಲಿಸುವ ಪಕ್ಷ ಅಧಿಕಾರಕ್ಕೆ ಬರಲಿದೆ. ಮೇಯರ್ ಸ್ಥಾನ ಬಿಟ್ಟು ಕೊಡುವವರಿಗೆ ಬೆಂಬಲ ನೀಡುವುದಾಗಿ ಹೇಳುವ ಮೂಲಕ ಜೆಡಿಎಸ್ ರಾಜಕೀಯ ಲೆಕ್ಕಾಚಾರದ ಲಾಭ ಪಡೆಯಲು ಮುಂದಾಗಿದೆ.
55 ಸದಸ್ಯಬಲದ ಕಲಬುರ್ಗಿ ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಇದ್ದಾರೆ. ಇವರೊಂದಿಗೆ ಸ್ಥಳೀಯ ಶಾಸಕರು, ಸಂಸದರು ಕೂಡ ಮತದಾನ ಮಾಡಲಿದ್ದಾರೆ. ಈ ಲೆಕ್ಕಚಾರದಲ್ಲಿ ಕಾಂಗ್ರೆಸ್ ಗೆ 31, ಬಿಜೆಪಿಗೆ 29 ಮತಗಳಿದ್ದು, ಜೆಡಿಎಸ್ ಪಕ್ಷದ ನಾಲ್ಕು ಮತಗಳು ನಿರ್ಣಾಯಕವಾಗಿರುವುದರಿಂದ ಮೇಯರ್ ಸ್ಥಾನಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಮೇಯರ್ ಹುದ್ದೆ ನೀಡಿದವರಿಗೆ ಬೆಂಬಲ ನೀಡಲಾಗುವುದು. ನಮ್ಮ ಪಕ್ಷದ ವರಿಷ್ಠರು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ಪಾಲಿಕೆ ಸದಸ್ಯರು ತಿಳಿಸಿದ್ದಾರೆ.