ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷಾಂತರ ಪರ್ವ ಶುರುವಾಗಿದೆ. 123 ಸ್ಥಾನ ಗಳಿಸಿ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್ ಎದುರಾಗಿದೆ.
ಅಧಿವೇಶನ ಮುಗಿದ ನಂತರ ಪಕ್ಷದ ನಾಲ್ವರು ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಾರೆ. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ, ಕೋಲಾರದ ಕೆ. ಶ್ರೀನಿವಾಸಗೌಡ, ಗುಬ್ಬಿಯ ಎಸ್.ಆರ್. ಶ್ರೀನಿವಾಸ್ ಅವರು ಜೆಡಿಎಸ್ ಗೆ ರಾಜೀನಾಮೆ ನೀಡಲು ಸಿದ್ಧವಾಗಿದ್ದಾರೆ,
ವಿಧಾನಮಂಡಲ ಅಧಿವೇಶನ ಮುಗಿದ ನಂತರ ಜೆಡಿಎಸ್ ನಿಂದ ಅಧಿಕೃತವಾಗಿ ದೂರವಾಗಿ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಶಿವಲಿಂಗೇಗೌಡ, ಶ್ರೀನಿವಾಸಗೌಡ ಹಾಗೂ ಎಸ್.ಆರ್. ಶ್ರೀನಿವಾಸ್ ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು, ಎ.ಟಿ. ರಾಮಸ್ವಾಮಿ ಯಾವ ಪಕ್ಷ ಸೇರಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಪಕ್ಷದ ಶಾಸಕರು ದೂರವಾಗಿರುವುದಕ್ಕೆ ಜೆಡಿಎಸ್ ನಾಯಕರು ತಲೆಕೆಡಿಸಿಕೊಂಡಿಲ್ಲ. ಈ ಎಲ್ಲಾ ಕ್ಷೇತ್ರಗಳನ್ನು ಈಗಾಗಲೇ ಬೇರೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಭರ್ಜರಿ ಪ್ರಚಾರವನ್ನೂ ನಡೆಸಲಾಗಿದೆ. ಆದರೂ ಹಾಲಿ ಶಾಸಕರು ಪಕ್ಷ ತೊರೆಯುತ್ತಿರುವುದು ಹಿನ್ನಡೆ ಎಂದು ಹೇಳಲಾಗಿದೆ.