ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಪ್ರಜ್ವಲ್ ರೇವಣ್ಣ ಪರವಾಗಿ ಪ್ರಚಾರ ನಡೆಸಿದ ಮೋದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು ಪ್ರಧಾನಿ ಮೋದಿ ಪ್ರಜ್ವಲ್ ರೇವಣ್ಣ ಪರವಾಗಿ ಪ್ರಚಾರ ಮಾಡಿದ ಫೋಟೋ ಬಿಡುಗಡೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪ್ರಚಾರ ಸಭೆಗಳಲ್ಲಿ ಪ್ರಜ್ವಲ್ ಪ್ರಕರಣವನ್ನು ಪ್ರಸ್ತಾಪಿಸಿ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಟೀಕಿಸುತ್ತಿದ್ದಾರೆ. ಪ್ರಜ್ವಲ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ನಿರಂತರ ದಾಳಿಗಳಿಂದ ಕಂಗಾಲಾಗಿರುವ ಬಿಜೆಪಿ ನಾಯಕರು ಮೈತ್ರಿ ಮುರಿದುಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವುದರಿಂದ ಅವರೊಂದಿಗೆ ಸಂಬಂಧವಿಲ್ಲ ಎಂದು ಬಿಜೆಪಿಗೆ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಕರಣ ನುಂಗಲಾರದ ತುತ್ತಾಗಿದೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಮೈತ್ರಿಯಿಂದ ಹೊರಬರಲು ರಾಜ್ಯ ಬಿಜೆಪಿ ನಾಯಕರು ಕೇಂದ್ರ ನಾಯಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾಗಿರುವುದರಿಂದ ಚುನಾವಣೆ ಮುಗಿದ ನಂತರ ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ಮೈತ್ರಿ ಮಾಡಿಕೊಳ್ಳದಂತೆ ಸಲಹೆ ನೀಡಿದ್ದಾರೆ. ಪದವೀಧರದ ಮತ್ತು ಶಿಕ್ಷಕರ ಕ್ಷೇತ್ರಗಳ ಆರು ಸ್ಥಾನಗಳಿಗೆ ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಸಂಘ ಪರಿವಾರದ ಮುಖಂಡರು ಕೂಡ ಬಿಜೆಪಿಗೆ ಇದೇ ಸಲಹೆ ನೀಡಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಪ್ರತಿಕೂಲ ಫಲಿತಾಂಶ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.