ಬೆಂಗಳೂರು: ವಿಧಾನಪರಿಷತ್ ನಲ್ಲಿ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಮತ್ತು ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ವಿಧಾನಪರಿಷತ್ತಿನಲ್ಲಿ ದೊಡ್ಡ ಪಕ್ಷವಾಗಿದ್ದರೂ ಬಿಜೆಪಿಗೆ ಸ್ವಂತ ಬಲದ ಮೇಲೆ ಸಭಾಪತಿ ಮತ್ತು ಉಪಸಭಾಪತಿ ಆಯ್ಕೆಗೆ ಅವಕಾಶ ಇಲ್ಲದ ಕಾರಣ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಮಾಡಲಾಗುವುದು. ಉಪಸಭಾಪತಿ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಡಲಾಗುವುದು. ಈ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ನಿವಾಸದಲ್ಲಿ ಪಕ್ಷದ ನಾಯಕರ ಸಭೆ ನಡೆದಿದೆ. ಸಭಾಪತಿ ಸ್ಥಾನವನ್ನು ಜೆಡಿಎಸ್ ಪಡೆದುಕೊಂಡು ಬಸವರಾಜ ಹೊರಟ್ಟಿ ಅವರನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆದಿದೆ. ಉಪಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಸದಸ್ಯರನ್ನು ಬೆಂಬಲಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ. ಬಿಜೆಪಿ ವಿಧಾನಪರಿಷತ್ ಸದಸ್ಯರ ಸಭೆ ಇಂದು ನಡೆಯಲಿದ್ದು, ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಉಪಸಭಾಪತಿ ಸ್ಥಾನ ಪಡೆಯುವ ಕುರಿತು ಚರ್ಚೆ ನಡೆಸಲಾಗುವುದು ಎನ್ನಲಾಗಿದೆ.