ಬೆಂಗಳೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ ನ 6 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಮುಂದುವರೆದಿದ್ದು, ಬಿಜೆಪಿಗೆ 4 ಹಾಗೂ ಜೆಡಿಎಸ್ ಗೆ 2 ಸೀಟು ಹಂಚಿಕೆಯಾಗಲಿದೆ.
ಬಿಜೆಪಿ ಹೈಕಮಾಂಡ್ ವತಿಯಿಂದ ಶನಿವಾರ ಪ್ರಕಟಿಸಲಾದ ಪಟ್ಟಿಯಲ್ಲಿ ಐವರು ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿತ್ತು. ಜೆಡಿಎಸ್ ಗೆ ಒಂದು ಸ್ಥಾನ ಮಾತ್ರ ಬಿಟ್ಟುಕೊಡಲಾಗಿತ್ತು. ಬದಲಾದ ಬೆಳವಣಿಗೆಯಲ್ಲಿ ಜೆಡಿಎಸ್ ಗೆ ಹೆಚ್ಚುವರಿಯಾಗಿ ಮತ್ತೊಂದು ಸೀಟು ನೀಡಲು ತೀರ್ಮಾನಿಸಲಾಗಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಗೆ ನೀಡಲಾಗುತ್ತದೆ.
ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಗೆ ನೀಡುವುದರಿಂದ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸ್ಪರ್ಧಿಸುವ ಸಾಧ್ಯತೆ ಇದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರು ಈ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ದಕ್ಷಿಣ ಶಿಕ್ಷಕರ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿದ್ದ ಇ.ಸಿ. ನಿಂಗರಾಜು ಅವರಿಗೆ ಸ್ಪರ್ಧೆಯ ಅವಕಾಶ ಕೈ ತಪ್ಪಲಿದೆ. ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರಿಗೆ ಭಾನುವಾರ ಬಿ ಫಾರಂ ವಿತರಿಸಲಾಗಿದೆ.