ರಾಜ್ಯ ರಾಜಕೀಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆಯುವ ವದಂತಿ ಹರಡಿದೆ. ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿದೆ ಎನ್ನುವ ಸುದ್ದಿ ಹರಡಿದ್ದು, ಈ ಕುರಿತಾಗಿ ಉಭಯ ಪಕ್ಷಗಳ ನಾಯಕರು ಸ್ಪಷ್ಟನೆ ನೀಡಿ ಅಂತಹ ಯಾವುದೇ ಸಾಧ್ಯತೆ ಇಲ್ಲವೆಂದು ತಿಳಿಸಿದ್ದಾರೆ.
ಆದರೆ, ಬಿಜೆಪಿ-ಜೆಡಿಎಸ್ ವಿಲೀನದ ಸುದ್ದಿ ಹಿಂದೆ ಮಾಸ್ಟರ್ ಪ್ಲಾನ್ ಇದೆ. ಇದ್ದಕ್ಕಿದ್ದಂತೆ ಬಿಜೆಪಿ-ಜೆಡಿಎಸ್ ವಿಲೀನದ ಸುದ್ದಿ ಹರಿಬಿಟ್ಟಿದ್ದು ಏಕೆ? ರಾಜ್ಯ ರಾಜಕಾರಣದಲ್ಲಿ ಇಂತಹ ಸುದ್ದಿ ದಿಢೀರ್ ಹರಿದಾಡಿದ್ದು ಏಕೆ? ಇದರ ಹಿಂದೆ ಗೇಮ್ ಪ್ಲಾನ್ ಇದೆಯೇ ಎನ್ನುವ ಚರ್ಚೆ ಜೋರಾಗಿ ನಡೆದಿದೆ.
ಜೆಡಿಎಸ್ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಇಂತಹುದೊಂದು ಸುದ್ದಿಯನ್ನು ಹರಿಬಿಡಲಾಗಿದೆ ಎನ್ನಲಾಗಿದೆ. ಅನೇಕ ಜೆಡಿಎಸ್ ಶಾಸಕರು ಬಿಜೆಪಿ ಇಲ್ಲವೇ ಕಾಂಗ್ರೆಸ್ ಸೇರುವ ಸಿದ್ಧತೆಯಲ್ಲಿದ್ದಾರೆ. ಇದರಿಂದಾಗಿ ಕಂಗೆಟ್ಟ ದಳಪತಿಗಳು ಇಂತಹುದೊಂದು ದಾಳ ಉರುಳಿಸಿದ್ದಾರೆ. ಶಾಸಕರಲ್ಲಿ ಗೊಂದಲ ಸೃಷ್ಟಿಸಲು ಹೆಚ್.ಡಿ. ಕುಮಾರಸ್ವಾಮಿ ಆಪ್ತರು ವಿಲೀನದ ಸುದ್ದಿಯನ್ನು ವೈರಲ್ ಮಾಡಿದ್ದಾರೆ. ಗೊಂದಲ ಸೃಷ್ಟಿಸುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಕಮಲ ಪಾಳಯದಲ್ಲಿಯೂ ಇಂತಹ ವಿಚಾರ ಆತಂಕವನ್ನು ಸೃಷ್ಟಿಸಿದೆ. ಎರಡೂ ಪಕ್ಷಗಳಲ್ಲಿಯೂ ತಳಮಳ ಶುರುವಾಗಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆಯೇ ಸ್ಪಷ್ಟೀಕರಣ ನೀಡಿದ್ದಾರೆ. ಕುಮಾರಸ್ವಾಮಿ ಅವರೂ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಹೇಳಲಾಗಿದೆ.