ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮೈತ್ರಿ ತೊರೆದಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ.
ಇದರ ಮಧ್ಯೆ ತಮ್ಮ ಪಕ್ಷ ಬಿಜೆಪಿ ಜೊತೆ ಸಖ್ಯ ಕಡಿದುಕೊಂಡ ಬಳಿಕವೂ ರಾಜ್ಯಸಭಾ ಉಪಸಭಾಪತಿ ಸ್ಥಾನ ತೊರೆಯದ ಜೆಡಿಯು ಹಿರಿಯ ನಾಯಕ ಹರಿವಂಶ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಕೈ ಬಿಡಲಾಗಿದೆ.
ಇತ್ತೀಚೆಗೆ ಹರಿವಂಶ್ ಅವರು ಬಿಹಾರ ಮುಖ್ಯಮಂತ್ರಿ, ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದ ವೇಳೆ ರಾಜ್ಯಸಭಾ ಸ್ಥಾನ ತೊರೆಯುವಂತೆ ಅವರಿಗೆ ಸೂಚಿಸಲಾಗಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ಹರಿವಂಶ್ ಮಣಿಯದ ಹಿನ್ನೆಲೆಯಲ್ಲಿ ಈಗ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಕೈ ಬಿಡುವ ಮೂಲಕ ಪರೋಕ್ಷ ಎಚ್ಚರಿಕೆ ನೀಡಲಾಗಿದೆ.