ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ರಾಬರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳರು ದೊಡ್ಡ ದೊಡ್ಡದಾಗಿ ಪ್ಲ್ಯಾನ್ ಮಾಡುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಶಿವಮೊಗ್ಗದಲ್ಲಿ ಖತರ್ನಾಕ್ ಕಳ್ಳರು ಜೆಸಿಬಿಯನ್ನೇ ಕದ್ದು ತಂದು ಎಟಿಎಂ ಮೆಷಿನ್ ದರೋಡೆ ಮಾಡಲು ಮುಂದಾದ ಘಟನೆ ನಡೆದಿದೆ.
ಜೆಸಿಬಿಯನ್ನು ಎಲ್ಲಿಂದಲೋ ಕದ್ದು ತಂದ ಖದೀಮರು ಎಟಿಎಂ ದರೋಡೆಗೆ ಇಳಿದಿದ್ದಾರೆ, ಶಿವಮೊಗ್ಗದ ಎಟಿಎಂ ದರೋಡೆಗೆ ಜೆಸಿಬಿಯನ್ನು ಕದ್ದು ತಂದಿದ್ದ ದುಷ್ಕರ್ಮಿಗಳು ಆ್ಯಕ್ಸಿಸ್ ಬ್ಯಾಂಕ್ ಎಟಿಎಂ ದರೋಡೆಗೆ ಯತ್ನಿಸಿದ್ದಾರೆ. ಎಟಿಎಂ ಕೇಂದ್ರದ ರೋಲಿಂಗ್ ಶಟರ್ ಮುರಿದು ಗಾಜಿನ ಬಾಗಿಲು ಹಾನಿಗೊಳಿಸಿ ಎಟಿಎಂ ಕೇಂದ್ರದ ಒಳಗೆ ಜೆಸಿಬಿ ನುಗ್ಗಿಸಿದ್ದಾರೆ.
ಜೆಸಿಬಿ ನುಗ್ಗಿಸಿದ್ದರಿಂದ ಮೆಷಿನ್ ಗೆ ಹಾನಿಯಾಗಿದೆ. ಆದರೆ ಗಸ್ತು ತಿರುಗುತ್ತಿದ್ದ ಪೊಲೀಸರು ಕೂಡಲೇ ಅಲರ್ಟ್ ಆಗಿದ್ದು ಸ್ಥಳಕ್ಕೆ ದೌಡಾಯಿಸಿದ್ದಾರೆ, ಪೊಲಿಸರು ಬರುತ್ತಿದ್ದಂತೆ ಕಳ್ಳರು ಜೆಸಿಬಿ ಬಿಟ್ಟು ಕಾಲ್ಕಿತ್ತಿದ್ದಾರೆ. ಸದ್ಯ ಜೆಸಿಬಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.