ವಿಜಯಪುರ : ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ನನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೌದು, ನಿನ್ನೆ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದ್ದು, ಕೋಟ್ಯಾಂತರ ಜನರ ಪ್ರಾರ್ಥನೆ ನೆರವೇರಿದೆ .ಸತತ 20 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಸುರಕ್ಷಿತವಾಗಿ ಮಗುವನ್ನು ಹೊರಕ್ಕೆ ಕರೆತರಲಾಗಿದೆ.
ಜೆಸಿಬಿ, ಡ್ರಿಲ್ಲಿಂಗ್ ಮೆಷಿನ್ ಸದ್ದಿಗೂ ಹೆದರದ ಪೋರ ; ಸಾತ್ವಿಕ್ ತಪಾಸಣೆ ನಡೆಸಿದ ವೈದ್ಯರಿಗೆ ಶಾಕ್..!
ಹೌದು, ಸಾತ್ವಿಕ್ ನನ್ನು ತಪಾಸಣೆ ನಡೆಸಿದ ವೈದ್ಯರೇ ಶಾಕ್ ಆಗಿದ್ದು, ಇದು ಬಹಳ ಅತ್ಯಂತ ವಿರಳ ಎಂದರು. ನಿನ್ನೆ ರಾತ್ರಿಯಿಂದ ಜೆಸಿಬಿಯಿಂದ ಕೊರೆದು, ಡ್ರಿಲ್ಲಿಂಗ್ ಮೆಷಿನ್ ನಿಂದ ಬಂಡೆ ಹುಡಿ ಮಾಡಲಾಗುತ್ತಿತ್ತು. ಸತತ 20 ಗಂಟೆ ಡ್ರಿಲ್ಲಿಂಗ್ ಮೆಷಿನ್ ಹಾಗೂ ಜೆಸಿಬಿಗಳ ಭಾರಿ ಶಬ್ದ ಕೇಳಿಬಂದರೂ ಸಾತ್ವಿಕ್ ಕೊಂಚ ಕೂಡ ಭಯಪಡಲಿಲ್ಲ, ಈ ವಿಚಾರ ತಪಾಸಣೆ ವೇಳೆ ಗೊತ್ತಾಗಿದೆ ಎಂದು ತಾಲೂಕು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. 20 ಗಂಟೆಗಳ ಕಾಲ ಅನ್ನ, ನೀರು, ಗಾಳಿ, ಬೆಳಕು ಇಲ್ಲದೇ ಎರಡು ವರ್ಷದ ಮಗು ಬದುಕುಳಿದಿದ್ದೇ ಒಂದು ದೊಡ್ಡ ಪವಾಡ, ಇದೊಂದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲು ಎಂದಿದ್ದಾರೆ.
ಮಗುವನ್ನು ಎಲ್ಲಾ ರೀತಿಯಲ್ಲೂ ತಪಾಸಣೆ ನೀಡಲಾಗಿದ್ದು, ಆಕ್ಸಿಜನ್, ಪಲ್ಸ್ ರೇಟ್ ಸೇರಿದಂತೆ ಮಗುವಿನ ಆರೋಗ್ಯ ಸ್ಥಿತಿ ಸಹಜವಾಗಿದೆ. 2-3 ದಿನದಲ್ಲಿ ಬಾಲಕ ಎಂದಿನಂತೆ ಆಟವಾಡಲಿದ್ದಾನೆ. ನಮ್ಮ ಆಸ್ಪತ್ರೆಯ ಸಿಬ್ಬಂದಿಗಳು ಕೂಡ ಬಹಳ ಮುತುವರ್ಜಿ ವಹಿಸಿ ಮಗುವಿನ ಆರೈಕೆ ಮಾಡುತ್ತಿದ್ದಾರೆ ಎಂದರು.