ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಫ್ತು ಘಟಕ ಸ್ಥಾಪನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಅವರು ಮಾಹಿತಿ ನೀಡಿ, ಗಣಿಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಗಿಣಗೇರಾ –ರಾಯಚೂರು, ತುಮಕೂರು –ರಾಯದುರ್ಗ, ಬಾಗಲಕೋಟೆ –ಕುಡಚಿ, ಚಿಕ್ಕಮಗಳೂರು -ಬೇಲೂರು ರೈಲು ಮಾರ್ಗಗಳ ಯೋಜನೆಗಳಿಗೆ ರಾಜ್ಯದ ಪಾಲಿನ ಮೊತ್ತ 964.41 ಕೋಟಿ ರೂಪಾಯಿ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘಕ್ಕೆ ಜಮೀನು ಮಂಜೂರು ಮಾಡಲಾಗಿದೆ. ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಒಂದು ಎಕರೆ 31 ಗುಂಟೆ ಜಮೀನು ಮಂಜೂರು ಮಾಡಲಾಗಿದೆ. ಸ್ಮಶಾನ ಉದ್ದೇಶದ ಬದಲಾಗಿ ಶೈಕ್ಷಣಿಕ ಉದ್ದೇಶ ಎಂದು ಮಾರ್ಪಾಡು ಮಾಡಲಾಗಿದೆ.
ಶ್ರೀಹರ ಪಂಚಮಸಾಲಿ ಸೇವಾ ಟ್ರಸ್ಟ್ ಗೆ 20 ಗುಂಟೆ ಶಿಕಾರಿಪುರ ತಾಲೂಕಿನ ಧೂಪದಹಳ್ಳಿಯಲ್ಲಿ 20 ಗುಂಟೆ ಜಮೀನು ಮಂಜೂರು ಮಾಡಲಾಗಿದೆ.
ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಶಿಕಾರಿಪುರ ತಾಲೂಕಿನ ಧೂಪದಹಳ್ಳಿಯಲ್ಲಿ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ.