ಬೆಂಗಳೂರು: ವಿಜಯನಗರದಲ್ಲಿ ಹಂಪಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನಸೌಧದಲ್ಲಿ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ.
454 ಕೋಟಿ ರೂಪಾಯಿ ವೆಚ್ಚದಲ್ಲಿ ಹಂಪಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಮಾರ್ಗಸೂಚಿ ದರದಲ್ಲಿ ಹಂಪಿ ಸಕ್ಕರೆ ಕಾರ್ಖಾನೆಗೆ 82 ಎಕರೆ ಜಮೀನು ನೀಡಲಾಗುವುದು. ಸಕ್ಕರೆ ಕಾರ್ಖಾನೆಯಿಂದ 2000 ಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.
ರಾಜ್ಯ ಸರ್ಕಾರಿ ನೌಕರರ ವೇತನ ಶೇಕಡ 17ರಷ್ಟು ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ವಾರ್ಷಿಕವಾಗಿ 7246.85 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ದೂರ ಸಂಪರ್ಕ ಜಾಲ ಇಲ್ಲದ ಕಡೆ ದೂರ ಸಂಪರ್ಕ ಸ್ಥಾವರ ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಗ್ರಾಮದಲ್ಲಿಯೂ ಬಿಎಸ್ಎನ್ಎಲ್ ಗೆ 2,000 ಚದರ ಅಡಿ ಭೂಮಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಬಿಎಂಟಿಸಿಗೆ ಮೋಟಾರ್ ವಾಹನ ತೆರಿಗೆಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದ್ದು, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೂ ತೆರಿಗೆ ವಿನಾಯಿತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.