
ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಸೇವಾವಧಿಯನ್ನು ಮುಂದುವರೆಸಲಾಗಿದೆ.
ಜುಲೈ 19 ರಂದು ಅವರ ಸೇವಾವಧಿ ಮುಕ್ತಾಯವಾಗಲಿದ್ದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಅವರನ್ನು 6 ತಿಂಗಳ ಕಾಲ ಮುಂದುವರೆಸಲು ತೀರ್ಮಾನಿಸಲಾಗಿದೆ. ಜನವರಿ ತಿಂಗಳವರೆಗೆ ಮಂಜುನಾಥ್ ಅವರನ್ನು ಮುಂದುವರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನೂ ಆರು ತಿಂಗಳು ಅವರು ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.
2007 ರಿಂದ ಸತತ 16 ವರ್ಷಗಳ ಕಾಲ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವಾ ಅವಧಿಯಲ್ಲಿ ಆಸ್ಪತ್ರೆ ನೀಡುವ ಸೇವೆ ಮತ್ತು ಸೌಲಭ್ಯದಲ್ಲಿ ವಿಶ್ವ ಮಾನ್ಯತೆ ಪಡೆದುಕೊಂಡಿದೆ. ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಜಯದೇವ ಆಸ್ಪತ್ರೆಯ ಶಾಖೆಗಳನ್ನು ತೆರೆಯಲಾಗಿದೆ.
ಕಳೆದ ವರ್ಷವೇ ಅವರ ಸೇವಾ ಅವಧಿ ಮುಕ್ತಾಯವಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ರೋಗಿಗಳು ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ಸರ್ಕಾರ ಒಂದು ವರ್ಷ ಸೇವೆಯನ್ನು ಮುಂದುವರೆಸಿತ್ತು.