ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಜನವರಿ 31ರಂದು ಮುಕ್ತಾಯವಾಗಲಿದ್ದು, ನೂತನ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.
ಟ್ರೀಟ್ ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್ ಎಂಬ ಪರಿಕಲ್ಪನೆಯಲ್ಲಿ ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಡಾ.ಸಿ.ಎನ್.ಮಂಜುನಾಥ್. ವೈದ್ಯಕೀಯ ಕ್ಷೇತ್ರದಲ್ಲಿ ಅವರ ಕಾರ್ಯವೈಖರಿ ಹಾಗೂ ಅಗತ್ಯತೆ ಕಂಡು ಎರಡು ಬಾರಿ ಅವರ ಅವಧಿಯನ್ನು ವಿಸ್ತರಿಸಲಾಗಿತ್ತು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರ ಅವಧಿಯನ್ನು ಒಂದುವರ್ಷ ವಿಸ್ತರಿಸಿ ಆದೇಶ ನೀಡಲಾಗಿತ್ತು.
ಇದೀಗ ಈ ತಿಂಗಳಾಂತ್ಯಕ್ಕೆ ಮಂಜುನಾಥ್ ಅವರ ಅವಧಿ ಮುಕ್ತಾಯವಾಗಲಿದೆ. ನೂತನ ನಿರ್ದೇಶಕರ ಆಯ್ಕೆಗಾಗಿ ಪತ್ರಿಕಾ ಪ್ರಕಟಣೆ ಮೂಲಕ ಅರ್ಜಿ ಸಲ್ಲಿಕೆಗೆ ಸರ್ಕಾರ ಸೂಚಿಸಿತ್ತು. ಅದರಂತೆ ಅರ್ಜಿ ಸಲ್ಲಿಕೆ ಅವಧಿಯೂ ಮುಕ್ತಾಯವಾಗಿದೆ.
ಈ ಮಧ್ಯೆ ಜಯದೇವ ನೂತನ ನಿರ್ದೇಶಕರಾಗಿ ಮೈಸೂರು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ದಿನೇಶ್ ಅವರನ್ನು ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಡಾ.ಸಿ.ಎನ್.ಮಂಜುನಾಥ್ ಅವಧಿ ಮುಕ್ತಾಯವಾಗುತ್ತಿರುವ ಬೆನ್ನಲ್ಲೇ ಸಾಕಷ್ಟು ಸಿಬ್ಬಂದಿಗಳು ವರ್ಗಾವಣೆ ಬಯಸಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದ, ರೋಗಿಗಳ ನೋವಿಗೆ ಸ್ಪಂದಿಸುತ್ತಿದ್ದ, ಬಡ ರೋಗಿಗಳಿಗೆದೇವರಾಗಿದ್ದ ಮಂಜುನಾಥ್ ಅವರ ಅವಧಿ ಮುಗಿಯುತ್ತಿರುವುದು ಬೇಸರ ತಂದಿದೆ ಎಂದು ಕಣ್ಣಿರಿಟ್ಟಿದ್ದಾರೆ.