
ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬುಳ್ಳಾಸಂದ್ರ ಗ್ರಾಮದಲ್ಲಿ ಶ್ರಾವಣ ಶನಿವಾರ ಪ್ರಯುಕ್ತ ಗ್ರಾಮದಲ್ಲಿ ಆಯೋಜಿಸಿದ್ದ ಮುತ್ತುರಾಯಸ್ವಾಮಿ ಜಾತ್ರೆಯಲ್ಲಿ ಮಾಡಿದ್ದ ಆಹಾರ ಸೇವಿಸಿದ ನಂತರ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಆಹಾರ ಸೇವಿಸಿದ ನಂತರ ವಾಂತಿ, ಭೇದಿ ಕಾಣಿಸಿಕೊಂಡು ಮೂವರು ಮಹಿಳೆಯರು ಮೃತಪಟ್ಟಿದ್ದು, 18 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೇವರ ಜಾತ್ರೆಯಲ್ಲಿ ಮಾಡಿದ್ದ ಪ್ರಸಾದ ಸೇವನೆಯಿಂದ ಇವರು ಮೃತಪಟ್ಟಿರುವುದಾಗಿ ಸ್ಥಳೀಯರು ಶಂಕಿಸಿದ್ದಾರೆ. ಆದರೆ ಇದನ್ನು ತಳ್ಳಿ ಹಾಕಿರುವ ಆರೋಗ್ಯ ಅಧಿಕಾರಿಗಳು ವಯೋಸಹಜವಾಗಿ ಇಬ್ಬರು, ಮತ್ತೊಬ್ಬ ಮಹಿಳೆ ವಾಂತಿ ಭೇದಿಯಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬುಳ್ಳಾಸಂದ್ರ ಗ್ರಾಮದ ಮುತ್ತುರಾಯಸ್ವಾಮಿ, ಕರಿಯಮ್ಮ ದೇವಿ, ಭೂತಪ್ಪ ಸ್ವಾಮಿ ದೇವರಿಗೆ ಹರಿಸೇವೆ ಏರ್ಪಡಿಸಿದ್ದು, ಆರತಿ ಬೆಳಗಿದ ಹೆಣ್ಣು ಮಕ್ಕಳು ಪ್ರಸಾದವಾಗಿ ಹೆಸರುಬೇಳೆ ಪಾಯಸ, ಅನ್ನ ಸಾಂಬಾರ್ ಸೇವಿಸಿ ಮನೆಗೆ ಮರಳಿದ್ದಾರೆ.
ನಂತರ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ತಿಮ್ಮಕ್ಕ(90), ಹಿರಿಯಮ್ಮ(80) ಅದೇ ದಿನ ರಾತ್ರಿ ಮೃತಪಟ್ಟಿದ್ದಾರೆ. ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದ ಕಾಟಮ್ಮ(40) ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ. ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಲಾಗಿದೆ. ಆರು ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆಯ ಬಳಿಕ ಸಾವಿನ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.